ಚೆನ್ನೈ:  ಚುನಾವಣಾ ನೀತಿ ಸಂಹಿತೆ ಜಾರಿಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯಆಯುಕ್ತ ಟಿ.ಎನ್.ಶೇಷನ್(86) ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.


COMMERCIAL BREAK
SCROLL TO CONTINUE READING

1932ರಲ್ಲಿ ಕೇರಳದ ಪಾಲಕ್ಕಾಡ್‌ನ‌ಲ್ಲಿ ಡಿ. 15ರಂದು ಜನಿಸಿದ್ದ ಟಿ.ಎನ್. ಶೇಷನ್, ಭಾರತೀಯ ಆಡಳಿತ ಸೇವೆಗೆ ತಮಿಳುನಾಡು ಕೇಡರ್‌ನಿಂದ 1955ರಲ್ಲಿ ಸೇರ್ಪಡೆಗೊಂಡಿದ್ದರು. ತಮಿಳುನಾಡು ಸರ್ಕಾರದಲ್ಲಿ ಹಲವು ಇಲಾಖೆಗಳ ನಾನಾ ಹುದ್ದೆಗಳನ್ನು ಅಲಂಕರಿಸಿದ್ದ ಶೇಷನ್, ಬಳಿಕ ಕೇಂದ್ರದಲ್ಲಿ ಕೆಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. 


ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಸರಕಾರವಿದ್ದಾಗ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕರಾದ ಟಿ.ಎನ್. ಶೇಷನ್  ಡಿಸೆಂಬರ್ 12, 1990 ರಿಂದ ಡಿಸೆಂಬರ್ 11, 1996ರವರೆಗೆ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. 


ಟಿ.ಎನ್. ಶೇಷನ್ ಅವರ ಅಧಿಕಾರಾವಧಿಯಲ್ಲಿ ಅರ್ಹ ಮತದಾರರಿಗೆ ಗುರುತಿನ ಚೀಟಿ(Voter ID) ಜಾರಿಗೆ ತರಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆಯೋಗದ ಕಾರ್ಯ ವಿಧಾನವನ್ನು ಬದಲಿಸಿ ದೇಶದ ಗಮನ ಸೆಳೆದಿದ್ದ ಇವರು, ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಕೀರ್ತಿ ಶೇಷನ್ ಅವರಿಗೆ ಸಲ್ಲುತ್ತದೆ.