ರಾಜಕೀಯ ಆಶ್ರಯ ಕೋರಿ ಭಾರತಕ್ಕೆ ಆಗಮಿಸಿದ ಪಾಕ್ ಮಾಜಿ ಶಾಸಕ
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಹಿಂದೂ ಮತ್ತು ಸಿಖ್ ನಾಯಕರ ಹತ್ಯೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಪಾಕ್ ಗೆ ಮರಳಲು ಸಿದ್ಧವಿಲ್ಲ ಎಂದು ಕುಮಾರ್ ಝೀ ನ್ಯೂಸ್ ಗೆ ತಿಳಿಸಿದ್ದಾರೆ.
ನವದೆಹಲಿ: ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ರಾಜಕೀಯ ಆಶ್ರಯ ಕೋರಿ ಪಾಕಿಸ್ತಾನದ ಮಾಜಿ ಶಾಸಕರೊಬ್ಬರು ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ಥಾಪಿಸಿದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸದಸ್ಯರಾಗಿದ್ದ ಬಾಲ್ದೇವ್ ಕುಮಾರ್, ಪುಖ್ತುಂಖ್ವಾ ಅಸೆಂಬ್ಲಿಯ ಬರಿಕೋಟ್ ಕ್ಷೇತ್ರದ ಮಾಜಿ ಶಾಸಕರಾಗಿದ್ದರು. ಈ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ಬಾಲ್ದೇವ್ ಅವರನ್ನು ಬಳಿಕ ಪಾಕ್ ಸರ್ಕಾರ ಬಿಡುಗಡೆಗೊಳಿಸಿತ್ತು. ಇದೀಗ ನವದೆಹಲಿಗೆ ಆಗಮಿಸಿರುವ ಬಾಲ್ದೇವ್, ರಾಜಕೀಯ ಆಶ್ರಯ ಕೋರಿದ್ದು, ಮತ್ತೆ ಪಾಕಿಸ್ತಾನಕ್ಕೆ ಮರಳಲು ಬಯಸುವುದಿಲ್ಲ ಎಂದಿದ್ದಾರೆ.
"ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಹಿಂದೂ ಮತ್ತು ಸಿಖ್ ನಾಯಕರ ಹತ್ಯೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಪಾಕ್ ಗೆ ಮರಳಲು ಸಿದ್ಧವಿಲ್ಲ" ಎಂದು ಕುಮಾರ್ ಝೀ ನ್ಯೂಸ್ ಗೆ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪಾಕಿಸ್ತಾನ ಮೂಲದ ಸಿಖ್ ಬಾಲಕಿಯನ್ನು ಅಪಹರಿಸಿ, ಇಸ್ಲಾಂಗೆ ಮತಾಂತರಗೊಳ್ಳಲು ಮತ್ತು ಲಾಹೋರ್ ನ ನಂಕಾನಾ ಸಾಹಿಬ್ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಲು ಒತ್ತಾಯಿಸಿದ ಘಟನೆ ಇಡೀ ವಿಶ್ವಾದ್ಯಂತ ಭಾರೀ ಸುದ್ದಿ ಮಾಡಿತ್ತು. ಈ ಬೆನ್ನಲ್ಲೇ ಸಾಹಿಬ್ ಪಾಕ್ ಬಿಟ್ಟು ಭಾರತಕ್ಕೆ ಆಶ್ರಯ ಕೋರಿ ಬಂದಿದ್ದಾರೆ.
ದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ಪಾಕಿಸ್ತಾನ ಪದೇ ಪದೇ ವಿಫಲವಾಗಿದ್ದು, ಇದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎದ್ದುಕಾಣುತ್ತದೆ. ಅದರಲ್ಲೂ ಅಲ್ಪಸಂಖ್ಯಾತ ಮಹಿಳೆಯರು ಮತ್ತು ಹುಡುಗಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ.