ಅಜಾತಶತ್ರುಗೆ ಅಂತಿಮ ವಿದಾಯ; ಪಂಚಭೂತಗಳಲ್ಲಿ ವಾಜಪೇಯಿ ಲೀನ
ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಶುಕ್ರವಾರ ಸಂಜೆ 4.55ಕ್ಕೆ ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನೆರವೇರಿತು.
ನವದೆಹಲಿ: ಅಜಾತಶತ್ರು, ದೇಶ ಕಂಡ ಮಹಾನ್ ನಾಯಕ, ಕವಿ, ವಾಗ್ಮಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಶುಕ್ರವಾರ ಸಂಜೆ 4.55ಕ್ಕೆ ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನೆರವೇರಿತು.
ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಅಂತ್ಯ ಸಂಸ್ಕಾರದಲ್ಲಿ ಶಾಂತಿ ಮಂತ್ರ ಘೋಷಗಳು ಮೊಳಗಿದವು. ಕುಟುಂಬದ ಸದಸ್ಯರು ವಾಜಪೇಯಿ ಪಾರ್ಥಿವ ಶರೀರಕ್ಕೆ ವಂದಿಸಿ ಪ್ರದಕ್ಷಿಣೆ ಹಾಕಿದರು. ವಾಜಪೇಯಿ ಅವರ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಪುತ್ರಿ ನಮಿತಾ ಭಟ್ಟಾಚಾರ್ಯ ಪಡೆದರಲ್ಲದೆ, ವಾಜಪೇಯಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಶ್ರೀಗಂಧದ ಕಟ್ಟಿಗೆ, ತುಪ್ಪ, ಕರ್ಪೂರ ಮತ್ತು ಆಕಳ ಬೆರಣಿ ಬಳಸಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಅಂತಾರಾಷ್ಟ್ರೀಯ ನಾಯಕರೂ ಸಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ, ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಮುಖ್ಯ ಕಚೇರಿಯಲ್ಲಿ ದರ್ಶನಕ್ಕೆ ಇಡಲಾಗಿತ್ತು. ನಂತರ ಬಿಜೆಪಿ ಮುಖ್ಯ ಕಚೇರಿಯಿಂದ ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ನಡೆದ ಅಂತಿಮ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಅನೇಕ ನಾಯಕರು ಜನರೊಂದಿಗೆ ನಡೆದೇ ಸಾಗಿದರು.
ಕಿಡ್ನಿ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಅವರನ್ನು ಜೂ. 11ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 16ರಂದು ಸಂಜೆ 5.05ಕ್ಕೆ ಮೃತಪಟ್ಟಿದ್ದರು. ದೇಶ ಕಂಡ ಮಹಾನ್ ನಾಯಕನ ಅಗಲಿಕೆಯಿಂದ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ಆಗಸ್ಟ್ 22ರವರೆಗೆ 7 ದಿನಗಳ ಶೋಕಾಚರಣೆ ಘೋಷಿಸಿದೆ.