ಬಿಹಾರ: ಮಾಜಿ ಆರ್ಜೆಡಿ ಸಂಸದ ಮೊಹಮ್ಮದ್ ಶಹಬುದ್ದೀನ್ ಸೋದರಳಿಯನ ಹತ್ಯೆ
ಪ್ರಸ್ತುತ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಅಪರಾಧಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸಿವಾನ್: ತಿಹಾರ್ ಜೈಲಿನಲ್ಲಿ ಶಿಕ್ಷೆಗೆ ಒಳಗಾದ ಮಾಜಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸಂಸದ ಮೊಹಮ್ಮದ್ ಶಹಾಬುದ್ದೀನ್ ಅವರ ಸೋದರಳಿಯ ಯೂಸುಫ್ ನನ್ನು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಗುಂಡುಹಾರಿಸಿ ಹತ್ಯೆಗೈದಿದ್ದಾರೆ.
ಯೂಸುಫ್ ನನ್ನು ದಕ್ಷಿಣ್ ಟೋಲಾ ಮೊಹೊಲ್ಲಾದಲ್ಲಿ ಹತ್ಯೆಗೈಯಲಾಗಿದ್ದು, ಮೃತ ಪ್ರತಾಪೂರನ ನಿವಾಸಿ ಎಂದು ಹೇಳಲಾಗುತ್ತಿದೆ.
ಯೂಸುಫ್ ಗೆ ಗುಂಡುಹಾರಿಸಿದ ಬಳಿಕ ಅಪರಾಧಿಗಳು ತಪ್ಪಿಸಿಕೊಂಡಿದ್ದು, ಪ್ರಸ್ತುತ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಅಪರಾಧಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಘಟನೆ ಬಳಿಕ ಘಟನಾ ಪ್ರದೇಶದಲ್ಲಿ ಜನರಲ್ಲಿ ಗಾಬರಿ ಮನೆಮಾಡಿದ್ದು, ಪರಿಸ್ಥಿತಿ ತಿಳಿಯಾಗಿಸಲು ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಶಹಬುದ್ದೀನ್ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ನಿಕಟ ಸಹಾಯಕರಾಗಿದ್ದರು ಮತ್ತು ಸಿವಾನ್ನಲ್ಲಿ ಕುಖ್ಯಾತರಾಗಿ ಗುರುತಿಸಿಕೊಂಡಿದ್ದರು. ಡಿಸೆಂಬರ್ 9, 2015 ರಂದು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅವರು ಸದ್ಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಗ್ಯಾಂಗ್ ಸ್ಟರ್ ಆಗಿ ಗುರುತಿಸಿಕೊಂಡಿದ್ದ ಆತ ಬಳಿಕ ರಾಜಕಾರಣಿಯಾಗಿ ಗುರುತಿಸಿಕೊಂಡರು. ಅವರ ಮೇಲೆ ಸುಮಾರು 63 ಕೊಲೆ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿವೆ.