ನವದೆಹಲಿ : ಬ್ಯಾಂಕ್ಗಳಿಗೆ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರದ ಉದ್ಯಮಿ ವಿಕ್ರಂ ಕೊಠಾರಿ ಅವರ ಮನೆಯಲ್ಲಿ 20ಗಂಟೆಗೂ ಹೆಚ್ಚು ಸಮಯದಿಂದ ಠಿಕಾಣಿ ಹೂಡಿರುವ ಸಿಬಿಐ ಪರಿಶೀಲನೆ ನಡೆಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಸೋಮವಾರ ಪ್ರಕರಣ ಬೆಳಕಿಗೆ ಬಂದ ಕೂಡಲೇ ಕೊಠಾರಿ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಮಂಗಳವಾರ ಬೆಳಿಗ್ಗೆಯಾದರೂ ಇಡೀ ಮನೆಯ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದು, ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದೆ. 



ವಿವಿಧ ಬ್ಯಾಂಕುಗಳಲ್ಲಿ 3,695 ಕೋಟಿ ರೂ.ಸಾಲ ಪಡೆದು ವಂಚಿಸಿರುವ ಕುರಿತು ಪೆನ್​ ತಯಾರಕ ಕಂಪನಿ ರೋಟೊಮ್ಯಾಕ್​ ಗ್ಲೋಬಲ್​ ಅಂಡ್​ ಅಫೀಶಿಯಲ್ಸ್​ ಪ್ರೈವೇಟ್​ ಲಿ. ವಿರುದ್ಧ ಸೋಮವಾರ ಸಿಬಿಐ ದೂರು ದಾಖಲಿಸಿತ್ತು. ಈ ಮುಂಚೆ ಕೊಠಾರಿ ಬ್ಯಾಂಕ್ ಗಳಿಗೆ ಸುಮಾರು 800 ಕೋಟಿ ರುಪಾಯಿ ವಂಚಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅದು 3, 695 ಕೋಟಿ ರೂ. ತಲುಪಿದೆ. ಹೀಗಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೋಟೋಮ್ಯಾಕ್ ಪೆನ್ ಸಂಸ್ಥೆಯ ಮಾಲೀಕ ವಿಕ್ರಮ ಕೊಠಾರಿ ವಿರುದ್ಧದ ವಂಚನೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.



ಬ್ಯಾಂಕ್‌ ಆಫ್ ಬರೋಡ ನೀಡಿದ ದೂರಿನ ಅನ್ವಯ ಏಳು ಬ್ಯಾಂಕುಗಳ ಒಕ್ಕೂಟವು ಕೊಠಾರಿ ಮತ್ತು ಆತನ ಕಂಪೆನಿಯಿಂದ 2,919 ಕೋಟಿ ರೂ. ಬಡ್ಡಿ ಮೊತ್ತದ ಜೊತೆಗೆ ಒಟ್ಟು ವಂಚನೆ ಮೊತ್ತ 3,695 ಕೋಟಿ ರೂ.ಗಳಾಗಿದೇ ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ಎಎನ್ಐ ವರದಿ ಮಾಡಿದೆ. 


ಕೊಠಾರಿ, ಕಾನ್ಪುರ್ ಮೂಲದ ರೊಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಬ್ಯಾಂಕುಗಳ ಒಕ್ಕೂಟದಿಂದ ಹಣವನ್ನು ಪಡೆದಿದೆ ಎನ್ನಲಾಗಿದೆ. ಅವರ ಪತ್ನಿ ಸಾಧನಾ ಮತ್ತು ಮಗ ರಾಹುಲ್ ಈ ಕಂಪೆನಿಯ ನಿರ್ದೇಶಕರಾಗಿದ್ದಾರೆ. 


ನೀರವ್‌ ಮೋದಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 11,400 ಕೋಟಿ ರೂ. ವಂಚಿಸಿದ ಬೆನ್ನಲ್ಲೇ ರೊಟೋಮ್ಯಾಕ್ ಪ್ರಕರಣವು ಭಾನುವಾರ ಬೆಳಕಿಗೆ ಬಂದಿದ್ದು, ಇದು ಎರಡನೇ ಅತೀ ದೊಡ್ಡ ಹಣಕಾಸು ವಂಚನೆ ಹಗರಣ ಎನ್ನಲಾಗಿದೆ.