ನವದೆಹಲಿ: ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಜಾರಿಗೊಳಿಸಿ ಜನರಲ್ಲಿ ಜಾಗೃತಿ ಮುಡಿಸುವಲ್ಲಿ ಯಶಸ್ವಿಯಾದ ಕರ್ನಾಟಕ ರಾಜ್ಯದ ಗದಗ ಜಿಲ್ಲೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಪುರಸ್ಕಾರ ನೀಡಿ ಅಭಿನಂದಿಸಿದೆ. 


COMMERCIAL BREAK
SCROLL TO CONTINUE READING

ನವದೆಹಲಿಯಲ್ಲಿಂದು ಜರುಗಿದ ರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ ಸಮಾರಂಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಮನೇಕಾ ಗಾಂಧಿ ಅವರು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠಗೆ ಪ್ರಶಸ್ತಿಯನ್ನು ವಿತರಿಸಿ ಅಭಿನಂದಿಸಿದರು.


ಹೆಣ್ಣು ಮಕ್ಕಳ ರಕ್ಷಣೆ ಶಿಕ್ಷಣ, ಲಿಂಗ ಅನುಪಾತ, ಮಹಿಳಾ ಸಬಲೀಕರಣ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಕುರಿತು ಹೆಚ್ಚಿನ ಅರಿವು ಮೂಡಿಸಲು ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ(ಬಿಬಿಬಿಪಿ)-ಹೆಣ್ಣು ಮಗುವನ್ನು ಉಳಿಸಿ ಹೆಣ್ಣು ಮಗುವನ್ನು ಓದಿಸಿ ಯೋಜನೆಯನ್ನು 2015ರಲ್ಲಿ ಆರಂಭಿಸಲಾಗಿತ್ತು. 2018ರಲ್ಲಿ ಲಿಂಗಾನುಪಾತ ಆಧರಿಸಿ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರತೆಗಳನ್ನು ಉತ್ತೇಜಿಸಿ ಅವರ ಸರ್ವಾಂಗೀಣ ಅಭಿವೃದ್ಧಿಯ ಮೂಲ ಉದ್ದೇಶದ ಈ ಯೋಜನೆಯನ್ನು ದೇಶದ ಹಿಂದುಳಿದ 100 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ.


ಗದಗ ಜಿಲ್ಲೆಯ ಜನಸಂಖ್ಯೆ 10.64 ಲಕ್ಷ ಇದ್ದು 2011ರ ಸಮೀಕ್ಷೆ ಪ್ರಕಾರ ಮಕ್ಕಳ ಲಿಂಗಾನುಪಾತ 947 ಇದೆ. ಗದಗ ಜಿಲ್ಲೆಯಲ್ಲಿ ಈ ಯೋಜನೆಯು ಪರಿಣಾಮಕಾರಿ ಜಾರಿ ಹಾಗೂ ಜನಜಾಗೃತಿಗಾಗಿ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ರಚಿಸಲಾಗಿದೆ. ಜಿಲ್ಲೆಯ 122 ಗ್ರಾಮ ಪಂಚಾಯತಗಳಿಗೆ ಇಲಾಖಾ ಸಿಬ್ಬಂದಿಗಳೊಂದಿಗೆ ಕಲಾ ತಂಡದವರೊಂದಿಗೆ ಯೋಜನೆಯ ಜಾಗೃತಿ ಜಾಥಾಗಳನ್ನು ಏರ್ಪಡಿಸಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಯೋಜನೆಯ ಜಾರಿಗೆ ಉತ್ತಮವಾಗಿ ಶ್ರಮಿಸಿ ಕಾರ್ಯರೂಪಕ್ಕೆ ತಂದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತಕ್ಕೆ ಕೇಂದ್ರ ಸರಕಾರ ರಾಷ್ಟ್ರೀಯ ಪ್ರಶಸ್ತಿ ನೀಡಿದೆ.