ಗಾಂಧಿ ಜಯಂತಿ 2019: ಬಾಪೂಜಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳು!
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಅವರು. ಸತ್ಯ, ಅಹಿಂಸೆಗಳ ಪ್ರತೀಕ, ಸ್ವಾತಂತ್ರ್ಯದ ಹೋರಾಟಗಾರ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ, ಆದರ್ಶವಾದಿ, ದಾರ್ಶನಿಕ, ಜಗದ್ವಿಖ್ಯಾತಿಯನ್ನು ಪಡೆದ ಮಹಾತ್ಮ ಗಾಂಧೀಜಿ ಅಹಿಂಸೆಯ ಪ್ರತೀಕವಾದ್ದರಿಂದ ವಿಶ್ವಸಂಸ್ಥೆಯು ಗಾಂಧಿಜೀಯವರ ಜನ್ಮದಿನವಾದ ಅಕ್ಟೋಬರ್ 2 ನ್ನು `ವಿಶ್ವ ಅಹಿಂಸಾ ದಿನ`ವನ್ನಾಗಿ ಘೋಷಿಸಿದೆ.
ನವದೆಹಲಿ: ಪ್ರತಿ ವರ್ಷ ಅಕ್ಟೋಬರ್ 2ರಂದು ಮಹಾತ್ಮ ಗಾಂಧಿಯವರ ಜನ್ಮ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಅವರು. ಸತ್ಯ, ಅಹಿಂಸೆಗಳ ಪ್ರತೀಕ, ಸ್ವಾತಂತ್ರ್ಯದ ಹೋರಾಟಗಾರ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ, ಆದರ್ಶವಾದಿ, ದಾರ್ಶನಿಕ, ಜಗದ್ವಿಖ್ಯಾತಿಯನ್ನು ಪಡೆದ ಮಹಾತ್ಮ ಗಾಂಧೀಜಿ ಅಹಿಂಸೆಯ ಪ್ರತೀಕವಾದ್ದರಿಂದ ವಿಶ್ವಸಂಸ್ಥೆಯು ಗಾಂಧಿಜೀಯವರ ಜನ್ಮದಿನವಾದ ಅಕ್ಟೋಬರ್ 2 ನ್ನು 'ವಿಶ್ವ ಅಹಿಂಸಾ ದಿನ'ವನ್ನಾಗಿ ಘೋಷಿಸಿದೆ.
ದೇಶಾದ್ಯಂತ ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬಾಪೂಜಿಗೆ ಸಂಬಂಧಿಸಿದ ಕೆಲವು ಪ್ರಮುಖ ಸ್ಥಳಗಳ ಬಗ್ಗೆ ತಿಳಿಯೋಣ.
ಪೋರ್‌ಬಂದರ್
ಗುಜರಾತ್‌ನ ಪೋರ್‌ಬಂದರ್ ಮಹಾತ್ಮ ಗಾಂಧಿಯವರ ಜನ್ಮಸ್ಥಳ. ಅವರು 1869 ರಲ್ಲಿ ಪುತಲಿಬಾಯಿ ಮತ್ತು ಕರಮ್‌ಚಂದ್ ಗಾಂಧಿ ದಂಪತಿಯ ಪುತ್ರನಾಗಿ ಜನಿಸಿದರು. ಪೋರ್‌ಬಂದರ್ನಲ್ಲಿರುವ ಪ್ರಮುಖ ಆಕರ್ಷಣೆ ಎಂದರೆ, ಗಾಂಧಿಯ ಪೂರ್ವಜರ ಮನೆಯಾದ ಕೀರ್ತಿ ಮಂದಿರ. ಕೀರ್ತಿ ಮಂದಿರದ ಹಿಂದೆ ಗಾಂಧಿಯವರ ಪತ್ನಿ ಕಸ್ತೂರಿ ಬಾ ಅವರು ಜನಿಸಿದ ನವೀ ಖಾದಿ ಕಟ್ಟಡವಿದೆ. ಕೀರ್ತಿ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ನವೀ ಖಾದಿ ಕಟ್ಟಡವನ್ನು ನಂತರದ ದಿನಗಳಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಗಾಂಧಿ ಗ್ರಂಥಾಲಯವಿದೆ.
ಸಾಬರಮತಿ ಆಶ್ರಮ
ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮದಲ್ಲಿ ಗಾಂಧಿಯವರು ಹಲವಾರು ವರ್ಷಗಳು ವಾಸಿಸಿದರು. 1915 ರ ಜನವರಿಯಲ್ಲಿ ಗಾಂಧಿಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಇಲ್ಲಿಯೂ ಆಶ್ರಮ ವಾಸವನ್ನು ಕೈಗೊಳ್ಳಬೇಕೆಂಬ ಉದ್ದೇಶದಿಂದ ಈ ಸತ್ಯಾಗ್ರಹಾಶ್ರಮವನ್ನು ಸ್ಥಾಪಿಸಿದರು. ಇದು ಭಾರತದ ಸ್ವಾತಂತ್ರ್ಯದ ಕೇಂದ್ರಬಿಂದುವಾಗಿದೆ.
1930 ರಿಂದ ಗಾಂಧಿಯವರು ಉಪ್ಪು ಸತ್ಯಾಗ್ರಹ ಎಂದೂ ಕರೆಯಲ್ಪಡುವ ದಂಡಿ ಯಾತ್ರೆಯನ್ನೂ ಇಲ್ಲಿಂದಲೇ ಕೈಗೊಂಡಿದ್ದರು. ಸ್ವರಾಜ್ಯ ಪ್ರಾಪ್ತಿಯಾಗದೆ ಆಶ್ರಮಕ್ಕೆ ಹಿಂತಿರುಗುವುದಿಲ್ಲವೆಂದು ಎಂದು ಗಾಂಧೀ ಪ್ರತಿಜ್ಞೆ ತೊಟ್ಟಿದ್ದರು. ಇಲ್ಲಿ ಗಾಂಧೀಜಿ ಒಂದು ಸಣ್ಣ ಕಾಟೇಜ್ ನಲ್ಲಿ ವಾಸಿಸುತ್ತಿದ್ದರು. ಇದನ್ನು ಈಗ 'ಹೃದಯ ಕುಂಜ್' ಎಂದು ಕರೆಯಲಾಗುತ್ತದೆ. ಹಾಗೆಯೇ, ಆಶ್ರಮವನ್ನು ಗಾಂಧಿ ಸ್ಮಾರಕ್ ಸಂಗ್ರಹಾಲಯ ಎಂಬ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಬರಮತಿ ಆಶ್ರಮವನ್ನು ಉದ್ಘಾಟಿಸಿದರು.
ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯ
ಈ ಮ್ಯೂಸಿಯಂ ನವದೆಹಲಿಯಲ್ಲಿದೆ. ಇದು ಗ್ಯಾಲರಿಗಳು, ವಸ್ತುಪ್ರದರ್ಶನ, ಗಾಂಧೀಜಿ ಸಾಧನೆ, ಜೀವನ ಮತ್ತು ತತ್ವಗಳನ್ನು ಸಾರುತ್ತದೆ. 1948 ರಲ್ಲಿ ಗಾಂಧಿಯನ್ನು ಹತ್ಯೆ ಮಾಡಿದ ನಂತರ ಇದು ಮೊದಲು ಮುಂಬಯಿಯಲ್ಲಿ ತೆರೆಯಲ್ಪಟ್ಟಿತು. ಆದಾಗ್ಯೂ, ನಂತರ ವಸ್ತುಸಂಗ್ರಹಾಲಯವನ್ನು ದೆಹಲಿಯ ರಾಜ್ ಘಾಟ್‌ಗೆ ಸ್ಥಳಾಂತರಿಸಲಾಯಿತು. ಇದು ಮಹಾತ್ಮ ಗಾಂಧಿಗೆ ಅರ್ಪಿತವಾದ ಸ್ಮಾರಕವಾಗಿದೆ.
ಮಣಿ ಭವನ
ಮುಂಬೈನಲ್ಲಿ ಮಹಾತ್ಮ ಗಾಂಧಿ ಅವರಿಗೆ ಅರ್ಪಿಸಲಾಗಿರುವ 'ಮಣಿ ಭವನ'ವು ವಸ್ತುಸಂಗ್ರಹಾಲಯ ಮತ್ತು ಐತಿಹಾಸಿಕ ಕಟ್ಟಡವಾಗಿದೆ. ಈ ಸ್ಥಳವು ಮುಂಬೈನಲ್ಲಿ ಗಾಂಧಿಯವರ ರಾಜಕೀಯ ಚಟುವಟಿಕೆಗಳನ್ನು ರೂಪಿಸಿತು. ಇದರಲ್ಲಿ ಅಸಹಕಾರ, ಸತ್ಯಾಗ್ರಹ, ಸ್ವದೇಶಿ, ಖಾದಿ ಮತ್ತು ಖಿಲಾಫತ್ ಚಳುವಳಿಗಳು ಸೇರಿವೆ. ಚಾರ್ಖಾ ಅವರೊಂದಿಗಿನ ಒಡನಾಟವೂ ಇಲ್ಲಿಂದಲೇ ಪ್ರಾರಂಭವಾಯಿತು ಎಂದು ಇತಿಹಾಸ ಹೇಳುತ್ತದೆ.
ಗಾಂಧಿ ಸಂಗ್ರಹಾಲಯ
ಬಿಹಾರದ ಪಾಟ್ನಾದಲ್ಲಿರುವ ಗಾಂಧಿ ಸಂಗ್ರಹಾಲಯವು ವಸ್ತುಸಂಗ್ರಹಾಲಯ ಮತ್ತು ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಇದು ಮಹಾತ್ಮ ಗಾಂಧಿಯವರ ಜೀವನ ಮತ್ತು ತತ್ವಗಳನ್ನು ಮತ್ತು ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಬಿಹಾರದಲ್ಲಿ ಅವರ ಪಾತ್ರವನ್ನು ಬಿಂಬಿಸುತ್ತದೆ. ಈ ಸಂಗ್ರಹಾಲಯದಲ್ಲಿ ಫೋಟೋಗಳು, ವರ್ಣಚಿತ್ರಗಳು, ಶಿಲ್ಪಗಳು, ಹಸ್ತಪ್ರತಿಗಳನ್ನು ಒಳಗೊಂಡಿರುವ ಗಾಂಧಿಯವರ ದೃಶ್ಯ ಜೀವನಚರಿತ್ರೆಯನ್ನು ಕಾಣಬಹುದು.
ಅಗಾ ಖಾನ್ ಅರಮನೆ
ಪುಣೆಯ ಅಗಾ ಖಾನ್ ಅರಮನೆ ಭಾರತೀಯ ಸ್ವಾತಂತ್ರ್ಯ ಚಳವಳಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. 1942ರ ಕ್ವಿಟ್ ಇಂಡಿಯಾ ಚಳವಳಿಯ ನಂತರ ಮಹಾತ್ಮ ಗಾಂಧಿ, ಕಸ್ತೂರಬಾ ಗಾಂಧಿ ಮತ್ತು ಅವರ ಕಾರ್ಯದರ್ಶಿ ಮಹಾದೇವ್ ದೇಸಾಯಿ ಅವರನ್ನು ಇಲ್ಲಿ ಬಂಧಿಸಲಾಯಿತು. ಬಳಿಕ ಕಸ್ತೂರಬಾ ಮತ್ತು ಮಹಾದೇವ್ ನಿಧನರಾದರು.