ನವದೆಹಲಿ: ಮೈಸೂರು ಮೂಲದ ಹಾರ್ವರ್ಡ್ ಯೂನಿವರ್ಸಿಟಿ ಪ್ರಾಧ್ಯಾಪಕ ಗೀತಾ ಗೋಪಿನಾಥ್ ಅನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಅರ್ಥಶಾಸ್ತ್ರಜ್ಞರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಸಂಸ್ಥೆ ಟ್ವೀಟ್ ಮಾಡಿದೆ. 


COMMERCIAL BREAK
SCROLL TO CONTINUE READING

ಇದೆ ವರ್ಷ ಡಿಸೆಂಬರ್ ನಲ್ಲಿ ನಿವೃತ್ತಿಯಾಗಲಿರುವ ಅರ್ಥಶಾಸ್ತ್ರಜ್ಞ ಮೌರಿ ಓಬ್ಸ್ಟ್ಫೆಲ್ಡ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಐಎಂಎಫ್ ತಿಳಿಸಿದೆ. ಗೀತಾ ಗೋಪಿನಾಥ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಇಂಟರ್ನ್ಯಾಷನಲ್ ಸ್ಟಡೀಸ್ ಅಂಡ್ ಎಕನಾಮಿಕ್ಸ್ನ ಜಾನ್ ಜ್ವಾನ್ಸ್ಟ್ರಾ ಪ್ರೊಫೆಸರ್ ಆಗಿದ್ದಾರೆ. ಅವರ ಸಂಶೋಧನೆಯು ಅಂತರರಾಷ್ಟ್ರೀಯ ಹಣಕಾಸು ಮತ್ತು ಸ್ಥೂಲ ಅರ್ಥಶಾಸ್ತ್ರದ ಬಗ್ಗೆ ಕೇಂದ್ರೀಕರಿಸುತ್ತದೆ.



"ಗೀತಾ ಗೋಪಿನಾಥ್ ಶೈಕ್ಷಣಿಕ ಹಿನ್ನಲೆ, ಬೌದ್ಧಿಕ ನಾಯಕತ್ವ ದಾಖಲೆಯನ್ನು ಮತ್ತು ವ್ಯಾಪಕ ಅಂತರಾಷ್ಟ್ರೀಯ ಅನುಭವವನ್ನು ಹೊಂದಿದ್ದರಿಂದ ಅವರನ್ನು ಐಎಮ್ಎಫ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಅಂತಹ ಪ್ರತಿಭಾನ್ವಿತ ವ್ಯಕ್ತಿಯನ್ನು ಹೆಸರಿಸಲು ಸಂತಸವಾಗುತ್ತಿದೆ ಎಂದು ಐಎಮ್ಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಾಗರ್ಡ್ ತಿಳಿಸಿದ್ದಾರೆ.


ಮೈಸೂರಿನ ಗೀತಾ ಈಗ ಯು.ಎಸ್. ಪ್ರಜೆ ಮತ್ತು ಭಾರತದ ಸಾಗರೋತ್ತರ ನಾಗರಿಕರಾಗಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿಯನ್ನು ಪಡೆದ ನಂತರ  ಎಂಎಯನ್ನು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದಿಂದ ಪಡೆದರು. ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಿಂದ 2001 ರಲ್ಲಿ  ಪಿಹೆಚ್ಡಿ ಪಡೆದಿದ್ದಾರೆ.


ಭಾರತ ಹಣಕಾಸು ಸಚಿವಾಲಯಕ್ಕೆ ಸಂಬಂಧಿಸಿದ ಜಿ 20 ವಿಷಯದಲ್ಲಿ "ಶ್ರೇಷ್ಠ ವ್ಯಕ್ತಿಗಳ ಸಲಹಾ ಸಮೂಹ" ದ ಸದಸ್ಯರಾಗಿ ಗೋಪಿನಾಥ್ ಅವರು ಸೇವೆ ಸಲ್ಲಿಸಿದ್ದಾರೆ. ಹಾರ್ವರ್ಡ್ ಗೆ ಸೇರುವ ಮೊದಲು ಗೀತಾ ಗೋಪಿನಾಥ್ ಚಿಕಾಗೋದ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಬಿಸಿನೆಸ್ನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿದ್ದರು.


2018 ರಲ್ಲಿ ಅವರು ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ಗೆ ಆಯ್ಕೆಯಾದರು. ಅದಕ್ಕೂ ಮುಂಚೆ, ಅವರು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವಿಶೇಷವಾದ ಅಲುಮ್ನಸ್ ಪ್ರಶಸ್ತಿಯನ್ನು ಪಡೆದರು.


2014ರಲ್ಲಿ, ಐಎಂಎಫ್ ಹೆಸರಿಸಿರುವ 25 ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟರು ಮತ್ತು 2011 ರಲ್ಲಿ ವಿಶ್ವ ಆರ್ಥಿಕ ವೇದಿಕೆಯಿಂದ ಅವರು ಯಂಗ್ ಗ್ಲೋಬಲ್ ಲೀಡರ್ ಆಗಿ ಆಯ್ಕೆಯಾದರು.