ಪಣಜಿ: ಗೋವಾ ಕ್ಯಾಬಿನೆಟ್ ವಿಸ್ತರಣೆ ಶನಿವಾರ (ಜುಲೈ 13) ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಜೀ ಮೀಡಿಯಾಕ್ಕೆ ತಿಳಿಸಿವೆ. ಎರಡು ದಿನಗಳ ಹಿಂದೆ ಬಿಜೆಪಿ ಸೇರಿಕೊಂಡ ಹತ್ತು ಕಾಂಗ್ರೆಸ್ ಶಾಸಕರಲ್ಲಿ ಮೂವರು ಶಾಸಕರನ್ನು ಒಳಗೊಂಡಂತೆ ನಾಳೆ ನಾಲ್ವರು ಶಾಸಕರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಗೋವಾ ಗಣಿಗಾರಿಕೆ ಕುರಿತು ಇಂದು ದೆಹಲಿಯಲ್ಲಿ ನಡೆಯಲಿರುವ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಶುಕ್ರವಾರ ದೆಹಲಿಯಲ್ಲಿದ್ದು, ಶನಿವಾರ ಬೆಳಿಗ್ಗೆ ಗೋವಾ ತಲುಪಲಿದ್ದಾರೆ. ಆದ್ದರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶನಿವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.


ಗೋವಾ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಕಾವ್ಲೇಕರ್ ನೇತೃತ್ವದ 10 ಕಾಂಗ್ರೆಸ್ ಶಾಸಕರ ಗುಂಪು ಆಡಳಿತಾರೂಢ ಬಿಜೆಪಿ ಜೊತೆಗೆ ವಿಲೀನಗೊಂಡು, 40 ಸ್ಥಾನಗಳ ಗೋವಾ ವಿಧಾನಸಭೆಯಲ್ಲಿ ಕೇಸರಿ ಪಕ್ಷದ ಬಲವನ್ನು 27 ಕ್ಕೆ ಹೆಚ್ಚಿಸಿತು.


ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಬುಧವಾರ ವಿಲೀನಗೊಂಡಿದ್ದ ಹತ್ತು ಮಾಜಿ ಗೋವಾ ಕಾಂಗ್ರೆಸ್ ಶಾಸಕರು ಗುರುವಾರ ಬಿಜೆಪಿಯ ರಾಷ್ಟ್ರಾಧ್ಯಕ್ಷರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿದ್ದರು. ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದ ಶಾಸಕರು ಇಂದು ಗೋವಾಕ್ಕೆ ಮರಳಿದ್ದಾರೆ.


ಬುಧವಾರ ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್ ಶಾಸಕರಲ್ಲಿ - ಚಂದ್ರಕಾಂತ್ ಕಾವ್ಲೇಕರ್, ಐಸಿಡೋರ್ ಫೆರ್ನಾಂಡಿಸ್, ಫ್ರಾನ್ಸಿಸ್ ಸಿಲ್ವೀರಾ, ಫಿಲಿಪೆ ನೆರಿ ರೊಡ್ರಿಗಸ್, ಜೆನ್ನಿಫರ್, ಅಟಾನಾಸಿಯೊ ಮಾನ್ಸರರೇಟ್, ಆಂಟೋನಿಯೊ ಫರ್ನಾಂಡಿಸ್, ನೀಲಕಂಠ ಹಾಲಂಕರ್, ಕ್ಲಾಫಾಸಿಯೊ ಡಯಾಸ್ ಮತ್ತು ವಿಲ್ಫ್ರೆಡ್ ಡಿ'ಸಾ ಸೇರಿದ್ದಾರೆ.


ಗೋವಾ ವಿಧಾನಸಭೆಯಲ್ಲಿ ಒಟ್ಟು 40 ಸದಸ್ಯರಿದ್ದಾರೆ - 17 (ಬಿಜೆಪಿ), 15 (ಕಾಂಗ್ರೆಸ್), 1 (ಎನ್‌ಸಿಪಿ), 1 (ಮಹಾರಾಷ್ಟ್ರವಾಡಿ ಗೋಮಂಟಕ್ ಪಕ್ಷ), 3 (ಗೋವಾ ಫಾರ್ವರ್ಡ್ ಪಕ್ಷ) ಮತ್ತು 3 (ಸ್ವತಂತ್ರ). 10 ಕಾಂಗ್ರೆಸ್ ಶಾಸಕರನ್ನು ಸೇರ್ಪಡೆಗೊಳಿಸುವುದರೊಂದಿಗೆ, ಬಿಜೆಪಿಯ ಬಲ ಈಗ 27 ಕ್ಕೆ ಏರಿದೆ.