ಪ್ರಯಾಣಿಕರ ಲಗೇಜ್ ಮರೆತು ಆಕಾಶಕ್ಕೆ ಹಾರಿದ ಗೋಏರ್ ವಿಮಾನ!
ಗೋ-ಏರ್ ಜಿ8-213 ವಿಮಾನವು ಪ್ರಯಾಣಿಕರ ಲಗೇಜನ್ನು ಶ್ರೀನಗರದಲ್ಲೇ ಬಿಟ್ಟು ಜಮ್ಮುವಿಗೆ ತೆರಳಿತ್ತು.
ಶ್ರೀನಗರ: ಗೋಏರ್ ಸಂಸ್ಥೆಗೆ ಸೇರಿದ ವಿಮಾನವೊಂದು ಪ್ರಯಾಣಿಕರ ಲಗೇಜನ್ನು ಮರೆತು ಜಮ್ಮುವಿಗೆ ಹಾರಿದ ಘಟನೆ ಭಾನುವಾರ ನಡೆದಿದೆ.
ಗೋ-ಏರ್ ಜಿ8-213 ವಿಮಾನವು ಪ್ರಯಾಣಿಕರ ಲಗೇಜನ್ನು ಶ್ರೀನಗರದಲ್ಲೇ ಬಿಟ್ಟು ಜಮ್ಮುವಿಗೆ ತೆರಳಿತ್ತು. ಜಮ್ಮು ತಲುಪಿದ ಪ್ರಯಾಣಿಕರು ತಮ್ಮ ಲಗೇಜು ದೊರೆಯದ ಕಾರಣ ಕೆಲ ಕಾಲ ಗಲಿಬಿಲಿಗೊಂಡಿದ್ದರು. ಆದರೆ ಮತ್ತೊಂದು ವಿಮಾನದಲ್ಲಿ ಲಗೇಜು ಸಾಗಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದ ವಿಮಾನ ಸಂಸ್ಥೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಗೋ-ಏರ್ ವಿಮಾನ ಸಂಸ್ಥೆ, ಲೋಡಿಂಗ್ನ ನಿರ್ಬಂಧದ ಕಾರಣದಿಂದ ಪ್ರಯಾಣಿಕರ ಲಗೇಜು ತುಂಬಿಸಲು ಸಾಧ್ಯವಾಗಲಿಲ್ಲ. ಶ್ರೀನಗರದಲ್ಲಿ ಪ್ರತಿಕೂಲ ಹವಾಮಾನದಿಂದ ಈ ಸಮಸ್ಯೆ ಉಂಟಾಗಿತ್ತು. ಆದರೆ ಮುಂದಿನ ವಿಮಾನದಲ್ಲಿ ಆದಷ್ಟು ಎಲ್ಲಾ ಲಗೇಜುಗಳನ್ನೂ ತರಿಸುವ ಪ್ರಯತ್ನ ಮಾಡಿ, ಪ್ರಯಾಣಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಉಳಿದ ಲಗೇಜುಗಳನ್ನು ಪ್ರಯಾಣಿಕರ ಸ್ಥಳಗಳಿಗೆ ತಲುಪಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.