ನವದೆಹಲಿ: 2019ರ ಕೇಂದ್ರ ಬಜೆಟ್ ಬೆನ್ನಲ್ಲೇ ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಆಮದು ಸುಂಕವನ್ನು ಶೇ.12.5ಕ್ಕೆ ಏರಿಸಲಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆ ದುಬಾರಿಯಾಗಿದೆ. ಆಮದು ಸುಂಕದ ಏರಿಕೆಯಿಂದಾಗಿ ಸರಕು ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಾಹ್ನದ ವಹಿವಾಟಿನಲ್ಲಿ 731 ರೂಪಾಯಿ ಏರಿಕೆಯಾಗಿದ್ದು, 10ಗ್ರಾಂ ಚಿನ್ನದ ಬೆಲೆ 34,948 ರೂ. ಇದೆ.


COMMERCIAL BREAK
SCROLL TO CONTINUE READING

ಆಮದು ಸುಂಕದಲ್ಲಿ ಶೇ.2.5 ಹೆಚ್ಚಳ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಮೇಲಿನ ಸುಂಕವನ್ನು 10 ರಿಂದ 12.5 ಕ್ಕೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.  ದೇಶೀಯ ಆಭರಣ ಉದ್ಯಮವು ಆಮದು ಸುಂಕವನ್ನು ಕಡಿತಗೊಳಿಸುವಂತೆ ಒತ್ತಾಯಿಸುತ್ತಿದ್ದ ಬೆನ್ನಲ್ಲೇ ಸರ್ಕಾರ ಸುಂಕವನ್ನು ಹೆಚ್ಚಿಸಿದೆ. ಈ ಹಿಂದೆ, ವಾಣಿಜ್ಯ ಸಚಿವಾಲಯವು ಆಮದು ಸುಂಕವನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು.


ಚಿನ್ನದ ಆಮದಿನಲ್ಲಿ ಕುಸಿತ
2018-19ರ ಆರ್ಥಿಕ ವರ್ಷದಲ್ಲಿ ಚಿನ್ನದ ಆಮದು ಶೇಕಡಾ 3 ರಷ್ಟು ಇಳಿಕೆಯಾಗಿ 32.8 ಬಿಲಿಯನ್‌ಗೆ ತಲುಪಿದೆ. ಚಿನ್ನದ ಆಮದಿನ ಇಳಿಕೆ ಚಾಲ್ತಿ ಖಾತೆ ಕೊರತೆಯನ್ನು ನೀಗಿಸಲು ಸಹಾಯ ಮಾಡಲಿದೆಯಾದರೂ ಚಾಲ್ತಿ ಖಾತೆಯಲ್ಲಿ ವಿದೇಶಿ ವಿನಿಮಯದ ಬಾಹ್ಯ ಹರಿವು ಮತ್ತು ಚಾಲ್ತಿ ಖಾತೆಯ ಹರಿವಿನ ವ್ಯತ್ಯಾಸವನ್ನು ಕೊರತೆ ಎಂದೇ ಹೇಳಲಾಗುತ್ತದೆ. 


2017-18ರ ಆರ್ಥಿಕ ವರ್ಷದಲ್ಲಿ ಒಟ್ಟು 33.7 ಬಿಲಿಯನ್ ನ್ನಷ್ಟು ಅಮೂಲ್ಯ ಲೋಹಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದು 2016-17ರಲ್ಲಿ 27.5 ಬಿಲಿಯನ್, 2015-16ರಲ್ಲಿ 31.8 ಬಿಲಿಯನ್ ಆಗಿತ್ತು. ಈ ಪ್ರಮಾಣಕ್ಕೆ ಸಂಬಂಧಿಸಿದಂತೆ, ಕಳೆದ ಹಣಕಾಸು ವರ್ಷದಲ್ಲಿ ದೇಶವು 982 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. 2017-18, 2016-17 ಮತ್ತು 2015-16ರ ಆರ್ಥಿಕ ವರ್ಷದಲ್ಲಿ ಕ್ರಮವಾಗಿ 955 ಟನ್, 778 ಟನ್ ಮತ್ತು 968 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ.