ನವದೆಹಲಿ: ಕೋಟ್ಯಂತರ ನೌಕರರಿಗೆ ಬಂಪರ್ ಸುದ್ದಿ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2018-19ರ ಆರ್ಥಿಕ ವರ್ಷಕ್ಕೆ ಪಿಎಫ್ ಮೇಲಿನ ಬಡ್ಡಿದರವನ್ನು ಶೇಕಡಾ 8.65 ಕ್ಕೆ (ಇಪಿಎಫ್‌ಒ ಬಡ್ಡಿದರ) ನಿಗದಿಪಡಿಸಿದೆ. ಪಿಎಫ್‌ ಖಾತೆದಾರರಿಗೆ 8.65 ರಷ್ಟು ಬಡ್ಡಿಯನ್ನು ನೀಡಲು ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.  2018-19ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿಯಲ್ಲಿ 8.65% ಬಡ್ಡಿಯನ್ನು ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಖಚಿತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಡ್ಡಿದರ ಏರಿಕೆಗೆ ಫೆಬ್ರವರಿಯಲ್ಲಿಯೇ ಅನುಮೋದನೆ:
2018-19ರ ಆರ್ಥಿಕ ವರ್ಷದಲ್ಲಿ 6 ಕೋಟಿ ಇಪಿಎಫ್‌ಒ ಸದಸ್ಯರಿಗೆ ಶೇ 8.65 ರಷ್ಟು ಬಡ್ಡಿ ಸಿಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮಂಗಳವಾರ ಘೋಷಿಸಿದ್ದಾರೆ. ಕೇಂದ್ರ ಮಂಡಳಿಯ ಟ್ರಸ್ಟಿಗಳು ಈ ವರ್ಷದ ಫೆಬ್ರವರಿಯಲ್ಲಿಯೇ ಶೇ .8.65 ರಷ್ಟು ಬಡ್ಡಿಯನ್ನು ಅನುಮೋದಿಸಿವೆ. ಇದರ ನಂತರ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ. ಆದರೆ, ಕೆಲವು ಕಾರಣಗಳಿಂದಾಗಿ ಅದನ್ನು ಪರಿಶೀಲಿಸಲು ಹಣಕಾಸು ಸಚಿವಾಲಯ ಕೇಳಿತ್ತು. ಈಗ ಹಣಕಾಸು ಸಚಿವಾಲಯ ಇದನ್ನು ಅನುಮೋದಿಸಿದೆ ಎಂದು ಅವರು ತಿಳಿಸಿದರು.


ಎರಡು ಸಚಿವಾಲಯಗಳ ನಡುವೆ ಒಮ್ಮತ:
ಪ್ರಸ್ತುತ, ಇಪಿಎಫ್‌ಒ ನಿಮ್ಮ ಪಿಎಫ್ ಖಾತೆಗೆ 8.55% ಬಡ್ಡಿಯನ್ನು ಪಾವತಿಸುತ್ತಿದೆ. ಇದನ್ನು ಕೇವಲ 8.65 ಕ್ಕೆ ಹೆಚ್ಚಿಸಲಾಗಿದೆ. ಕಳೆದ ತಿಂಗಳು ಕಾರ್ಮಿಕ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ನಡುವೆ ಬಡ್ಡಿದರದ ಬಗ್ಗೆ ಒಪ್ಪಂದವಾಗಿತ್ತು. 6 ಕೋಟಿ ಖಾತೆದಾರರಿಗೆ ಇದರ ನೇರ ಲಾಭ ಸಿಗಲಿದೆ.


ಪಿಎಫ್ ಹಿತದೃಷ್ಟಿಯಿಂದ ಹಣಕಾಸು ಸಚಿವಾಲಯ ಮತ್ತು ಕಾರ್ಮಿಕ ಸಚಿವಾಲಯದ ನಡುವೆ ದೀರ್ಘಕಾಲದಿಂದ ಒಮ್ಮತ ಮೂಡಿಬರುತ್ತಿರಲಿಲ್ಲ. ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದ ಬಗ್ಗೆ ಕಳೆದ ತಿಂಗಳು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕಾರ್ಮಿಕ ಮತ್ತು ಹಣಕಾಸು ಸಚಿವಾಲಯದ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಶೀಘ್ರದಲ್ಲೇ ಬಡ್ಡಿ ಮೊತ್ತವನ್ನು ಎಲ್ಲಾ ಖಾತೆದಾರರ ಖಾತೆಗೆ ಜಮಾ ಮಾಡಲಾಗುವುದು ಎಂದು ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ.