ಎಸ್‌ಬಿಐ ಗ್ರಾಹಕರಿಗೆ ಗುಡ್ ನ್ಯೂಸ್: ಅಗಸ್ಟ್ 1ರಿಂದ ಉಚಿತವಾಗಿ ಸಿಗಲಿದೆ ಈ ಸೇವೆ!
ಜುಲೈ 1ರಿಂದ ಆರ್‌ಟಿಜಿಎಸ್ ಹಾಗೂ ನೆಫ್ಟ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಹಿಂಪಡೆದುಕೊಂಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)
ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ಸೇವೆಯಲ್ಲಿ ಕೆಲ ಬದಲಾವಣೆ ಮಾಡಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೆಟ್ ಬ್ಯಾಂಕಿಂಗ್ ಮತ್ತು ಜನಪ್ರಿಯ ಮೊಬೈಲ್ ಅಪ್ಲಿಕೇಶನ್ ಯೋನೊ(YONO) ಸೇವೆಯನ್ನು ಮತ್ತೆ ಪ್ರಾರಂಭಿಸಲಿದೆ. ಅಷ್ಟೇ ಅಲ್ಲದೆ ನೆಟ್ ಬ್ಯಾಂಕಿಂಗ್ ಸೇವೆಯ ದರದಲ್ಲಿ ವಿನಾಯಿತಿ ನೀಡಿದೆ.
ಜುಲೈ 1ರಿಂದ ಆರ್‌ಟಿಜಿಎಸ್ ಹಾಗೂ ನೆಫ್ಟ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಹಿಂಪಡೆದುಕೊಂಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ), ಇದೀಗ ಆಗಸ್ಟ್ 1 ರಿಂದ ಐಎಂಪಿಎಸ್ ವಹಿವಾಟುಗಳಿಗೆ ಅನ್ವಯವಾಗುವ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಿದೆ.
ಎಸ್‌ಬಿಐ ಗ್ರಾಹಕರಿಗೆ ಹಣ ವರ್ಗಾವಣೆಯ ವಿವಿಧ ವಿಧಾನಗಳಲ್ಲಿ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಯೋನೊ, ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್‌ನಲ್ಲಿ ತಡೆರಹಿತ ಬ್ಯಾಂಕಿಂಗ್ ಅನ್ನು ಆನಂದಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಟ್ವಿಟ್ಟರ್ ಮೂಲಕ ಹಲವು ಗ್ರಾಹಕರಿಂದ ದೂರು:
ಯೋನೊ ಅಪ್ಲಿಕೇಶನ್‌ನಲ್ಲಿ ತಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಎಸ್‌ಬಿಐನ ಟ್ವಿಟರ್ ಖಾತೆಯಲ್ಲಿ ಹಲವು ಗ್ರಾಹಕರು ದೂರಿದ್ದಾರೆ. ಅಪ್ಲಿಕೇಶನ್ ಲಾಗ್ ಇನ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆನ್‌ಲೈನ್ ನೆಟ್ ಬ್ಯಾಂಕಿಂಗ್ ಸೇವೆಗಳ ವೆಬ್ ಪುಟ ಸರಿಯಾಗಿ ಲೋಡ್ ಆಗುತ್ತಿಲ್ಲ ಎಂಬ ಬಗ್ಗೆ ಹಲವು ದೂರುಗಳನ್ನು ಎಸ್‌ಬಿಐ ಸ್ವೀಕರಿಸಿತ್ತು.