ವಿಜ್ಞಾನ ಸಾಧನೆಯ `ವಿಕ್ರಮ` ಡಾ. ವಿಕ್ರಂ ಸಾರಾಭಾಯ್ 100ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ಇಂದು ಇಸ್ರೋ ಸಂಸ್ಥಾಪಕ, ವಿಜ್ಞಾನ ಸಾಧನೆಯ `ವಿಕ್ರಮ` ಡಾ.ವಿಕ್ರಮ್ ಸಾರಾಭಾಯ್ ಅವರ 100ನೇ ವರ್ಷದ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಅರ್ಪಿಸುವ ಮೂಲಕ ಶುಭಾಶಯ ಕೋರಿದೆ.
ನವದೆಹಲಿ: ಜಾಗತಿಕ ವೈಜ್ಞಾನಿಕ ಸಮೂಹಕ್ಕೆ ಕುತೂಹಲ ಮೂಡಿಸಿರುವ ಚಂದ್ರಯಾನ-2 ಉಪಗ್ರಹ ಚಂದ್ರನ ಮೇಲೆ ತನ್ನ ಪಾದಾರ್ಪಣೆ ಮಾಡಲಿರುವ ಈ ಸಂದರ್ಭದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿದ್ದ, ಬಾಹ್ಯಾಕಾಶ ಸಂಶೋಧನೆಗೆ ಬೃಹತ್ ಸಂಸ್ಥೆಯೊಂದನ್ನು ಹುಟ್ಟುಹಾಕಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಂಸ್ಥಾಪಕ ಡಾ. ವಿಕ್ರಂ ಸಾರಾಭಾಯ್ ಇಂದು ನಮ್ಮೊಂದಿಗಿದ್ದಿದ್ದರೆ ಅದೆಷ್ಟು ಸಂತೋಷಪಡುತ್ತಿದ್ದರೋ...
ಹೌದು, ಇಂದು ಇಸ್ರೋ ಸಂಸ್ಥಾಪಕ, ವಿಜ್ಞಾನ ಸಾಧನೆಯ 'ವಿಕ್ರಮ' ಡಾ.ವಿಕ್ರಮ್ ಸಾರಾಭಾಯ್ ಅವರ 100ನೇ ವರ್ಷದ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಅರ್ಪಿಸುವ ಮೂಲಕ ಶುಭಾಶಯ ಕೋರಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹರೆಂದೇ ಹೆಸರಾದ ವಿಕ್ರಮ್ ಸಾರಾಭಾಯ್ ಅವರು ಪ್ರಶಸ್ತಿ ವಿಜೇತ ಭೌತವಿಜ್ಞಾನಿ, ಕೈಗಾರಿಕೋದ್ಯಮಿ ಮತ್ತು ಸಂಸೋಧನಾ ತಜ್ಞ.
ಡಾ.ವಿಕ್ರಂ ಸಾರಾಭಾಯ್ ಅವರ 100ನೇ ಜನ್ಮದಿನೋತ್ಸವಕ್ಕೆ ಗೂಗಲ್ ವಿಶೇಷ ಡೂಡಲ್ ಅರ್ಪಿಸಿದೆ. ಈ ಡೂಡಲ್ ಅನ್ನು ಮುಂಬೈ ಮೂಲದ ಕಲಾವಿದ ಪವನ್ ರಾಜೂರ್ಕರ್ ಸಿದ್ಧಪಡಿಸಿದ್ದಾರೆ.
1919ರ ಆಗಸ್ಟ್ 12ರಂದು ಅಹಮದಾಬಾದ್‌ನಲ್ಲಿ ಜನಿಸಿದ ವಿಕ್ರಮ್ ಸಾರಾಭಾಯ್ ಅವರು ಗುಜರಾತಿನಲ್ಲಿ ಕಾಲೇಜು ವ್ಯಾಸಂಗ ಪೂರ್ಣಗೊಳಿಸಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು. ಬಳಿಕ ಭಾರತಕ್ಕೆ ಮರಳಿದ ಅವರು 1947 ರ ನವೆಂಬರ್ 11 ರಂದು ತಮ್ಮ 28ನೇ ವಯಸ್ಸಿನಲ್ಲಿ ಅಹಮದಾಬಾದ್‌ನಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯ(ಪಿಆರ್‌ಎಲ್)ವನ್ನು ಸ್ಥಾಪಿಸಿದರು.
ರಷ್ಯಾದ ಸ್ಪುಟ್ನಿಕ್ ಉಡಾವಣೆಯ ನಂತರ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವವನ್ನು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಡಾ. ವಿಕ್ರಮ್ ಸಾರಾಭಾಯ್, "ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವ ಕೆಲವರು ಇದ್ದಾರೆ. ನಮಗೆ, ಉದ್ದೇಶದ ಯಾವುದೇ ಅಸ್ಪಷ್ಟತೆಯಿಲ್ಲ ... ಮನುಷ್ಯ ಮತ್ತು ಸಮಾಜದ ನೈಜ ಸಮಸ್ಯೆಗಳಲ್ಲದೆ ಸುಧಾರಿತ ತಂತ್ರಜ್ಞಾನಗಳ ಅನ್ವಯದಲ್ಲಿ ನಾವು ಎರಡನೆಯವರಾಗಿರಬೇಕು" ಎಂದು ಹೇಳಿದ್ದರು.
ಭಾರತದಲ್ಲಿ ಮೊದಲ ರಾಕೆಟ್ ಉಡಾವಣಾ ಕೇಂದ್ರವನ್ನು ಸ್ಥಾಪಿಸುವಲ್ಲಿ ವಿಕ್ರಮ್ ಸಾರಾಭಾಯ್ ಅವರಿಗೆ ಭಾರತದ ಪರಮಾಣು ವಿಜ್ಞಾನ ಕಾರ್ಯಕ್ರಮದ ಪಿತಾಮಹ ಎಂದೇ ಪರಿಗಣಿಸಲ್ಪಟ್ಟ ಡಾ.ಹೋಮಿ ಬಾಬಾ ಅವರು ಸಾಕಷ್ಟು ಬೆಂಬಲ ನೀಡಿದ್ದರು. ಅಂತೆಯೇ ನವೆಂಬರ್ 21, 1963 ರಂದು ಸೋಡಿಯಂ ವೇಪರ್ ಪೇಲೋಡ್‌ನೊಂದಿಗೆ ಮೊದಲ ಉದ್ಘಾಟನಾ ಹಾರಾಟವನ್ನು ಪ್ರಾರಂಭಿಸಲಾಯಿತು.
ಸದಾ ದೇಶದ ಹಿತದೃಷ್ಟಿಯಿಂದಲೇ ಕನಸುಗಳನ್ನು ಹೊಂದಿದ್ದ ವಿಕ್ರಂ ಸಾರಾಭಾಯ್ ಅವರು, ಅದಕ್ಕಾಗಿ ಶ್ರದ್ಧೆ ಮತ್ತು ವಿಶ್ವಾಸದಿಂದ ಸಿದ್ಧತೆಗಳನ್ನು ನಡೆಸಿದ ದೂರದೃಷ್ಟಿ ಹೊಂದಿದ್ದ ವಿಜ್ಞಾನಿಯಾಗಿದ್ದರು. ಸರ್ ಸಿವಿ ರಾಮನ್ ಅವರ ನೆಚ್ಚಿನ ಶಿಷ್ಯರಾಗಿದ್ದ ಸಾರಾಭಾಯ್ ಅವರು, ಇಸ್ರೋಗೆ ಅಗತ್ಯವಾದ ತಾಂತ್ರಿಕ ನಿಪುಣರ ತರಬೇತಿ ನೀಡುವ ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯ ಹುಟ್ಟಿಗೂ ಕಾರಣರಾದರು. ಅಷ್ಟೇ ಅಲ್ಲದೆ, ಅಹಮದಾಬಾದ್ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸ್ಥಾಪನೆಗೂ ಕಾರಣಕರ್ತರಾದರು. ಇದು ಭಾರತೀಯ ನಿರ್ವಹಣಾ ಕೌಶಲ್ಯಕ್ಕೆ ಹೊಸ ರೂಪ ನೀಡಿದ್ದು ಸಹ ವಿಕ್ರಂ ಸಾರಾಭಾಯ್ ಅವರೇ.
ಈ ಹಿನ್ನೆಲೆಯಲ್ಲಿ ಸಾರಾಭಾಯ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಇಸ್ರೋ, ಚಂದ್ರಯಾನ-2 ನೌಕೆಯನ್ನು ಜುಲೈ 15ರಂದು ಉಡಾವಣೆ ಮಾಡಿದ್ದು, 3.84ಲಕ್ಷ ಕಿ.ಮೀ. ದೂರ ಕ್ರಮಿಸಿದ ಬಳಿಕ ಸೆಪ್ಟೆಂಬರ್ 6ರಂದು ಚಂದ್ರನ ಮೇಲೆ ಪಾದಾರ್ಪಣೆ ಮಾಡಲಿದೆ. ಈ ಕ್ಷಣಕ್ಕಾಗಿ ಇಡೀ ವಿಶ್ವವೇ ಎದುರುನೋಡುತ್ತಿದೆ.
ಇಂದು ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಸಾಹಸಕ್ಕೆ ಮುಂದಾಗಿರುವ ಇಸ್ರೋದ ಪ್ರತಿಯೊಂದು ಸಾಧನೆಯ ಹಿಂದೆ ಡಾ.ವಿಕ್ರಮ್ ಸಾರಾಭಾಯ್ ಅವರ ಕನಸು ಕಾಣುತ್ತದೆ. ಹೀಗೆ ಜಾಗತಿಕ ಮಟ್ಟದಲ್ಲಿ ಇಸ್ರೋ ತನ್ನದೇ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಲು ಕಾರಣಕರ್ತರಾದ ವಿಕ್ರಮ್ ಸಾರಾಭಾಯ್ ಅವರಿಗೆ ನಾವೂ ಸಹ ಜನ್ಮಶತಾಬ್ದಿಯ ಶುಭಾಶಯ ಹೇಳೋಣ.