`ದೇಶಾದ್ಯಂತ NRC ಜಾರಿಗೆ ತರುವ ಯಾವ ಯೋಜನೆಯೂ ಇಲ್ಲ`
ಲೋಕಸಭೆಯಲ್ಲಿ ಕಾಂಗ್ರೆಸ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಈ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಇಂದು ಸಂಸತ್ತಿನಲ್ಲಿಯೂ ಕೂಡ ಇದು ಗದ್ದಲಕ್ಕೆ ಕಾರಣವಾಗಿದೆ. ಲೋಕಸಭೆಯಲ್ಲಿ ಇಂದು ಮತ್ತೆ ಕಾಂಗ್ರೆಸ್ ಸಂಸದರು NRC ಹಾಗೂ CAAಗೆ ಸಂಬಂಧಿಸಿದಂತೆ ಗದ್ದಲ ಸೃಷ್ಟಿಸಿದ್ದಾರೆ. ಈ ವೇಳೆ ಮಾತನಾಡಿರುವ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರಾಯ್, 'ಸರ್ಕಾರ NRC ಜಾರಿಗೆ ತರಲು ಯಾವುದೇ ಪ್ಲಾನ್ ಮಾಡಿಲ್ಲ' ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಇಂದು ಸಂಸತ್ತಿನಲ್ಲಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌಧರಿ ವಿವಾದಾತ್ಮಕ ಟಿಪ್ಪಣಿ ಮಾಡಿದ್ದಾರೆ. ಈ ವೇಳೆ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಲಾಗಿದೆ.
ಸಂಸತ್ತಿನಲ್ಲಿ ಮಾತನಾಡುವ ವೇಳೆ BJPಯನ್ನು ಗುರಿಯಾಗಿಸಿರುವ ಅಧಿರ್ ರಂಜನ್ ಚೌಧರಿ " ಇಂದು ಈ ಜನರು ಗಾಂಧಿಜಿ ಅವರ ವಿರುದ್ಧ ಅವಾಚ್ಯ ಪದಗಳನ್ನು ಬಳಸುತ್ತಾರೆ. ಇವರು ರಾವಣನ ಸಂತತಿಗಳಾಗಿದ್ದಾರೆ. ರಾಮನ ಪೂಜಾರಿಯ ಅವಮಾನ ಮಾಡುತ್ತಾರೆ" ಎಂದು ಆರೋಪಿಸಿದ್ದಾರೆ. ಅವರ ಈ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿರುವ BJP ಸಂಸದರೂ ಕೂಡ ಗದ್ದಲ ಸೃಷ್ಟಿಸಿದ್ದಾರೆ. ಬಳಿಕ ಈ ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, "ಭಾರತೀಯ ಜನತಾಪಕ್ಷದ ಜನರು ಮಹಾತ್ಮಾ ಗಾಂಧಿ ಅವರ ನಿಜವಾದ ಭಕ್ತರಾಗಿದ್ದೇವೆ, ನಾವು ಅವರ ನಿಜವಾದ ಅನುಯಾಯಿಗಳಾಗಿದ್ದೇವೆ. ಕಾಂಗ್ರೆಸ್ ಜನರು ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಂತೆ ನಕಲಿ ಗಾಂಧಿ ಭಕ್ತರಾಗಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಅತ್ತ ಇನ್ನೊಂದೆಡೆ ರಾಜ್ಯಸಭೆಯಲ್ಲಿಯೂ ಕೂಡ ಪ್ರತಿಪಕ್ಷ ಮುಖಂಡರು ಕೂಡ NRC ಹಾಗೂ CAA ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.