ಸವಾಯಿ ಮಾಧೋಪುರ್: ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬುಧವಾರ ಸವಾಯಿ ಮಾಧೋಪುರ್ ಗೆ ಭೇಟಿ ನೀಡಿದ್ದರು. ಈ ವೇಳೆ ರಣಥಂಬೋರ್ ದುರ್ಗ್ನಲ್ಲಿರುವ ತ್ರಿನೇತ್ರ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯಕ್ಕಾಗಿ ಪ್ರಾರ್ಥಿಸಿದರು.


COMMERCIAL BREAK
SCROLL TO CONTINUE READING

ಬಳಿಕ ಹೆಲಿಕಾಪ್ಟರ್ ಮೂಲಕ ಖಂಡಾರ್ ತಲುಪಿದ ಪೈಲಟ್, ಕಾಂಗ್ರೆಸ್ ಅಭ್ಯರ್ಥಿ ನಮೋನಾರಾಯಣ ಮೀನಾ ಪರವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಪೈಲಟ್, ಬಿಜೆಪಿ ಸದಾ ಜನರಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಮತ್ತು ದೇವಸ್ಥಾನದ ಹೆಸರಿನಲ್ಲಿ ವಿಷ ಬೀಜ ಬಿತ್ತುತ್ತಿದೆ. ಇದೀಗ ಹಿಂದೂಸ್ಥಾನ್ ಮತ್ತು ಪಾಕಿಸ್ತಾನ್ ಹೆಸರಿನಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ ಎಂದರು.


ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಮೂರು ತಿಂಗಳು ಆಡಳಿತ ನಡೆಸಿದ್ದು, ಈ ಮೂರು ತಿಂಗಳ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಸಾಲಮನ್ನಾ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸೇರಿದಂತೆ ಎಲ್ಲಾ ಭರವಸೆಗಳನ್ನು ಪೂರೈಸಿದೆ ಎಂದು ಪೈಲಟ್ ಹೇಳಿದರು.


ರಾಜ್ಯದಲ್ಲಿ ಕಾಂಗ್ರೆಸ್ನ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿ ಸರಕಾರ ಕೆಲಸ ಮಾಡಿದೆ. ಇಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮುಚ್ಚಿದ ಯೋಜನೆಗಳನ್ನು ಮುಂದುವರಿಸಲಿದೆ.  ಮನ್ರೆಗಾ ಯೋಜನೆಯಡಿ ಬಿಜೆಪಿ ಸರ್ಕಾರದಲ್ಲಿ, ಕೇವಲ 9 ಲಕ್ಷ ಜನರಿಗೆ ರಾಜ್ಯದಲ್ಲಿ ಉದ್ಯೋಗ ನೀಡಲಾಗಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ರಾಜ್ಯದಲ್ಲಿ 30 ಲಕ್ಷ ಜನರು ಈ ಯೋಜನೆಯಡಿ ಉದ್ಯೋಗ ಪಡೆದಿದ್ದಾರೆ ಎಂದು ಸಚಿನ್ ಪೈಲಟ್ ತಿಳಿಸಿದರು.


ಬಿಜೆಪಿ ಸುಳ್ಳು ಭರವಸೆಗಳ ಸರ್ಕಾರ. ಎಲ್ಲರ ಏಳ್ಗೆಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಪೈಲೆಟ್ ಸಾರ್ವಜನಿಕ ಸಭೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ನಮೋನಾರಾಯಣ ಮೀನಾ, ಖಂದರ್ ಶಾಸಕ ಅಶೋಕ್ ಬರಾವ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.