ಬೆಂಗಳೂರು: ಟಿಪ್ಪು ಸುಲ್ತಾನ್ ಸಂಬಂಧಿತ ಇತಿಹಾಸದ ಅಧ್ಯಾಯಗಳನ್ನು ಪಠ್ಯ ಪುಸ್ತಕಗಳಿಂದ ತೆಗೆದು ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಬಿಜೆಪಿ ಪಕ್ಷವು ಟಿಪ್ಪುವನ್ನು ವಿರೋಧಿಸಿರುವುದರಿಂದ ಟಿಪ್ಪು ಸಂಬಂಧಿತ ಎಲ್ಲಾ ವಿಷಯಗಳನ್ನು ಶೇ.101ರಷ್ಟು ತೆಗೆದುಹಾಕಲಾಗುವುದು. ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. 


ರಾಷ್ಟ್ರೀಯ ಪಕ್ಷವಾಗಿ ಎಲ್ಲಾ ಮುಖ್ಯಮಂತ್ರಿಗಳು ಇತಿಮಿತಿಯಲ್ಲಿರಬೇಕು ಎಂಬುದು ಸಹಜ. ಈವರೆಗೂ ನಾನು ಮುಖ್ಯಮಂತ್ರಿಯಾಗಿ ತೆಗೆದುಕೊಂಡ ಯಾವ ನಿರ್ಧಾರಗಳನ್ನು ರಾಷ್ಟ್ರೀಯ ನಾಯಕರು ವಿರೋಧಿಸಿಲ್ಲ. ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದ ಅಭಿವೃದ್ಧಿಗೂ ನನಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಯಾವುದೇ ಕಟ್ಟುಪಾಡುಗಳನ್ನು ವಿಧಿಸಿಲ್ಲ ಎಂದು ಸಿಎಂ ಹೇಳಿದರು. 


ವಿಧಾನಸಭೆ ಉಪಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, 15 ಸ್ಥಾನಗಳಲ್ಲಿ ಕನಿಷ್ಠ 13 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ಎಲ್ಲಾ 15 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ. ಅನರ್ಹ ಶಾಸಕರ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.