ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದ್ದು, ಪುಲ್ವಾಮಾ ದಾಳಿಯ ಬಳಿಕ ದೇಶದ ಗಡಿ ಮತ್ತು ಜನರ ರಕ್ಷಣೆಯಲ್ಲಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. 


COMMERCIAL BREAK
SCROLL TO CONTINUE READING

ಇದರ ಅಡಿಯಲ್ಲಿ ಕೇಂದ್ರ ಸರ್ಕಾರ ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿಆರ್ಪಿಎಫ್), ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಮತ್ತು  ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಹೆಚ್ಚುವರಿಯಾಗಿ 10ಸಾವಿರ(ನೂರು ಕಂಪನಿ) ಅರೆಸೇನಾಪಡೆಯನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಿದೆ.


ನವದೆಹಲಿಯಿಂದ 10ಸಾವಿರ ಯೋಧರನ್ನು ಏರ್ ಲಿಫ್ಟ್ ಮೂಲಕ ಜಮ್ಮು-ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ ಮಾಡಲಾಗಿದೆ. ಅರೆಸೇನಾಪಡೆಯಲ್ಲಿ ಒಂದು ಕಂಪನಿ ಅಂದರೆ ಸುಮಾರು 80ರಿಂದ 150 ಸೈನಿಕರು ಇರುತ್ತಾರೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 100 ಕಂಪನಿಯಷ್ಟು ಸೈನಿಕರನ್ನು ಕಳುಹಿಸಿದ್ದು, ಸುಮಾರು 10 ಸಾವಿರ ಸೈನಿಕರನ್ನು ರವಾನಿಸಿದೆ.


ಶುಕ್ರವಾರ ತಡರಾತ್ರಿ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜಮಾತ್ ಇಸ್ಲಾಮಿ ಸಂಘಟನೆಯ ಸದಸ್ಯರು, ಅಮಿರ್ ಜಮಾತ್, ಜಹೀದ್ ಅಲಿ, ಹಮೀದ್ ಫಯಾಜ್, ಮುದಾಸಿರ್ ಅಹಮ್ಮದ್, ಅಬ್ದುಲ್ ರವೂಫ್, ಬಕ್ತಾವರ್ ಅಹ್ಮದ್ ಸೇರಿದಂತೆ ಹಲವು ಪ್ರತ್ಯೇಕತಾವಾದಿ ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 10ಸಾವಿರ ಅರೆಸೇನಾಪಡೆಯನ್ನು ರವಾನಿಸುವಂತೆ ಕೇಂದ್ರ ಗೃಹಸಚಿವಾಲಯ ಸಿಎಪಿಎಫ್ ಗೆ ನೋಟಿಸ್ ಮೂಲಕ ಮನವಿ ಮಾಡಿಕೊಂಡಿತ್ತು.


ಜಮಾತೆ ಇಸ್ಲಾಮಿ ಪ್ರತ್ಯೇಕತವಾದಿ ನಾಯಕರ ಆಟಾಟೋಪಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂವಿಧಾನದ 35ಎ ವಿಧಿ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಭಾರಿ ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ಬಂದಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.