ಬೆಂಗಳೂರು: ಸದನದಲ್ಲಿ ಸಭಾಧ್ಯಕ್ಷರೇ ಸುಪ್ರೀಂ. ವಿಶ್ವಾಸಮತ ನಿರ್ಣಯ ಸದನದ ಹಕ್ಕು. ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಸಮ್ಮಿಶ್ರ ಸರ್ಕಾರದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈಗಾಗಲೇ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಗಿದೆ. ಹಾಗಾಗಿ ಈ ವಿಚಾರ ಸದನದ ಸ್ವತ್ತು. ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಹೇಳಿದ್ದಾರೆ.


ಮುಂದುವರೆದು, ಶಾಸಕಾಂಗ ಪಕ್ಷದ ನಾಯಕನಾದ ನನಗೆ ವಿಪ್ ಜಾರಿಗೊಳಿಸುವ ಅವಕಾಶ ಇದೆಯೇ? ಇಲ್ಲವೇ? ಎಂಬ ಬಗ್ಗೆ ಸಭಾಧ್ಯಕ್ಷರ‌ ತೀರ್ಮಾನ ಕೇಳಿದ್ದೇನೆ. ಅವರು ಅಡ್ವೊಕೇಟ್ ಜನರಲ್ ಅವರ ಜೊತೆ ಚರ್ಚಿಸಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ಇದು ಇತ್ಯರ್ಥವಾಗುವರೆಗೆ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗುವ ಬಗ್ಗೆ ನಿರ್ಧರಿಸುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ಇದಕ್ಕೂ ಮುನ್ನ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವಾಸ ಮತ ಯಾಚನೆ ಬಗ್ಗೆ ಚರ್ಚೆ ಇನ್ನೂ ಮುಗಿದಿಲ್ಲ. ಇನ್ನೂ 20 ಶಾಸಕರು ಚರ್ಚೆಯಲ್ಲಿ ಭಾಗವಹಿಸಬೇಕಿದೆ. ಇಂದಿಗೇ ಮುಗಿಯುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಸೋಮವಾರವೂ ಚರ್ಚೆ ಮುಂದುವರಿಯಬಹುದು ಎಂದು ಹೇಳಿದ್ದಾರೆ.