ನಾಲ್ಕು ವರ್ಷಗಳಿಂದ ನಮ್ಮವರು ಬದುಕಿದ್ದಾರೆಂದೇ ಸರ್ಕಾರ ಹೇಳಿತ್ತು: ಹತ್ಯೆಯಾದವರ ಸಂಬಂಧಿಕರು
ಇರಾಕಿನ ಮೊಸುಲ್`ನಲ್ಲಿ 2014 ರಿಂದ ಕಾಣೆಯಾಗಿದ್ದ 39 ಭಾರತೀಯರು ಮೃತಪಟ್ಟಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ರಾಜ್ಯಸಭೆಯಲ್ಲಿ ಘೋಷಿಸಿದ್ದರು.
ನವದೆಹಲಿ : ಇರಾಕ್ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ ಕೂಡಲೇ ಮೃತರ ಕುಟುಂಬದವರು ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲು ಮನವಿ ಮಾಡಿದ್ದಾರೆ.
"ಕಳೆದ ನಾಲ್ಕು ವರ್ಷಗಳಿಂದ ಬದುಕಿದ್ದಾರೆ ಎಂದೇ ಹೇಳಿಕೊಂಡು ಬಂದಿದ್ದ ವಿದೇಶಾಂಗ ಸಚಿವಾಲಯ ಇದೀಗ ಇದ್ದಕ್ಕಿದ್ದಂತೆ ಮೃತಪಟ್ಟಿರುವುದಾಗಿ ಘೋಷಿಸಿರುವುದು ಗೊಂದಲ ಸೃಷ್ಟಿಸಿದೆ. ಯಾವುದನ್ನು ನಂಬಬೇಕೋ ತಿಳಿಯುತ್ತಿಲ್ಲ. ಈ ಸಂಬಂಧ ನಮಗೆ ಯಾವುದೇ ಮಾಹಿತಿ ನೀಡಲಾಗಿಲ್ಲ, ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯಿಂದ ಈ ವಿಚಾರ ತಿಳಿದಿದೆ" ಎಂದು ಕಾಣೆಯಾದ 39 ಮಂದಿ ಭಾರತೀಯರಲ್ಲಿ ಒಬ್ಬರಾದ ಮಂಜಿಂದರ್ ಸಿಂಗ್ ಸಹೋದರಿ ಗುರ್ಪಿಂದರ್ ಕೌರ್ ಹೇಳಿದ್ದಾರೆ.
ಇರಾಕಿನ ಮೊಸುಲ್'ನಲ್ಲಿ 2014 ರಿಂದ ಕಾಣೆಯಾಗಿದ್ದ 39 ಭಾರತೀಯರು ಮೃತಪಟ್ಟಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ರಾಜ್ಯಸಭೆಯಲ್ಲಿ ಘೋಷಿಸಿದ್ದರು.
ಮೃತ ದೇಹದ ಅವಶೇಷಗಳನ್ನು ಬಾಗ್ದಾದ್'ಗೆ ಕಳುಹಿಸಲಾಗಿತ್ತು. ಅಲ್ಲದೆ, ದೇಹಗಳ ಪರಿಶೀಲನೆಗೆ, ಅವರ ಸಂಬಂಧಿಕರ ಡಿಎನ್ಎ ಮಾದರಿಗಳನ್ನು ಕಳುಹಿಸಲಾಗಿತ್ತು. ಪಂಜಾಬ್, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳು ಇದರಲ್ಲಿ ಭಾಗಿಯಾಗಿದ್ದವು. 2014ರಲ್ಲಿ ಅಪಹರಣಕ್ಕೊಳಗಾದ 40 ಜನರಲ್ಲಿ ಒಬ್ಬರು ತಪ್ಪಿಸಿಕೊಂಡಿದ್ದು, ಉಳಿದ 39 ಮಂದಿಯಲ್ಲಿ ಮಣ್ಣುಮಾಡಲಾಗಿದ್ದ 38 ಮೃತದೇಹಗಳ ಡಿಎನ್ಎ ಮಾದರಿಗಳು ಸಂಪೂರ್ಣ ಹೊಂದಾಣಿಕೆಯಾಗಿದ್ದು, 39ನೇ ಮೃತ ದೇಹದ ಡಿಎನ್ಎ ಶೇ.70 ಹೊಂದಾಣಿಕೆಯಾಗಿದೆ. ಇವರನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹತ್ಯೆಗೈದಿರುವುದಾಗಿ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದರು.
"ನನ್ನ ಗಂಡ 2011 ರಲ್ಲಿ ಇರಾಕ್'ಗೆ ಹೋಗಿದ್ದರು. ನಾನು ಅವರೊಂದಿಗೆ 2014ರ ಜೂನ್ 24ರಂದು ಕಡೆಯದಾಗಿ ಮಾತನಾಡಿದ್ದೆ. ಅವರು ಇಂದಿಗೂ ಜೀವಂತರಾಗಿದ್ದಾರೆ ಎಂದೇ ತಿಳಿದಿದ್ದೆವು. ಸರ್ಕಾರಕೆ ಇನ್ನು ನಾವು ಯಾವ ಬೇಡಿಕೆಯನ್ನೂ ಸಲ್ಲಿಸುವುದಿಲ್ಲ" ಎಂದು ಮೃತ ದೇವಿಂದರ್ ಸಿಂಗ್ ಪತ್ನಿ ಮಜೀತ್ ಕೌರ್ ಹೇಳಿದ್ದಾರೆ.
ಇರಾಕ್'ಗೆ ಕೇಂದ್ರ ಸಚಿವ ವಿ.ಕೆ.ಸಿಂಗ್
ಇರಾಕಿನಲ್ಲಿ ಹತ್ಯೆಯಾದ 39 ಭಾರತೀಯರ ಮೃತ ದೇಹಗಳನ್ನು ಭಾರತಕ್ಕೆ ಮರಳಿ ತರಲು ಕೇಂದ್ರ ಸಚಿವ ವಿ.ಕೆ.ಸಿಂಗ್ ಇರಾಕ್'ಗೆ ತೆರಳಲಿದ್ದಾರೆ. ಮೃತ ದೇಹಗಳನ್ನು ಹೊತ್ತ ವಿಮಾನವು ಮೊದಲು ಅಮೃತಸರಕ್ಕೆ ಹೋಗಿ, ನಂತರ ಪಾಟ್ನಾ ಮತ್ತು ಕೊಲ್ಕತ್ತಾಗೆ ಹೋಗಲಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.