ದಕ್ಷಿಣ ಕಾಶ್ಮೀರದಲ್ಲಿ ಗ್ರೆನೇಡ್ ದಾಳಿಗೆ ಟ್ರಾಫಿಕ್ ಪೋಲಿಸ್ ಸೇರಿ 14 ಮಂದಿಗೆ ಗಾಯ
ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಟೌನ್‌ಶಿಪ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಟ್ರಾಫಿಕ್ ಪೊಲೀಸ್ ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಟೌನ್‌ಶಿಪ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಟ್ರಾಫಿಕ್ ಪೊಲೀಸ್ ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇದು ಕಣಿವೆಯಲ್ಲಿ ನಡೆದ ಎರಡನೇ ಗ್ರೆನೇಡ್ ದಾಳಿಯಾಗಿದೆ.ಅನಂತ್‌ನಾಗ್ ಪಟ್ಟಣದ ಭಾರಿ ಬಿಗಿ ಭದ್ರತೆ ಇರುವ ಡಿಸಿ ಕಚೇರಿ ಸಂಕೀರ್ಣದ ಹೊರಗೆ ಭದ್ರತಾ ಗಸ್ತು ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದರು ಎಂದು ಅಧಿಕಾರಿ ತಿಳಿಸಿದ್ದಾರೆ. ಗ್ರೆನೇಡ್ ನಿರೀಕ್ಷಿತ ಗುರಿಯನ್ನು ತಪ್ಪಿ ರಸ್ತೆಬದಿಯಲ್ಲಿ ಸ್ಫೋಟಗೊಂಡಿದ್ದು, ಟ್ರಾಫಿಕ್ ಪೊಲೀಸ್ ಮತ್ತು ಸ್ಥಳೀಯ ಪತ್ರಕರ್ತ ಸೇರಿದಂತೆ 14 ಮಂದಿಗೆ ಗಾಯಗಳಾಗಿವೆ.
ಈಗ ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 13 ಮಂದಿಯನ್ನು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ. ಒಬ್ಬ ವ್ಯಕ್ತಿ ಇನ್ನೂ ಆಸ್ಪತ್ರೆಯಲ್ಲಿದ್ದರೂ ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.ಈ ಸ್ಫೋಟವು ಪಟ್ಟಣದ ಜನರಲ್ಲಿ ಭೀತಿಯನ್ನು ಹುಟ್ಟುಹಾಕಿದ್ದು, ಈ ಪ್ರದೇಶವನ್ನು ಈಗ ಭದ್ರತಾ ಪಡೆಗಳು ಸುತ್ತುವರೆದಿದೆ ಮತ್ತು ಈ ದಾಳಿಯ ಹಿಂದೆ ಭಯೋತ್ಪಾದಕರನ್ನು ಬಂಧಿಸಲು ಹುಡುಕಾಟ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದುವರೆಗೆ ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳನ್ನು ಹೊತ್ತುಕೊಂಡಿಲ್ಲ ಎನ್ನಲಾಗಿದೆ.