ಶ್ರೀನಗರದ ಲಾಲ್ ಚೌಕ್‌ನಲ್ಲಿ ಗ್ರೆನೇಡ್ ಸ್ಫೋಟ; 9 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ಭಯೋತ್ಪಾದಕರು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಈ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಶ್ರೀನಗರದ ಲಾಲ್ ಚೌಕ್‌ನಲ್ಲಿ ನಡೆದ ಗ್ರೆನೇಡ್ ಸ್ಫೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಗಾಯಗೊಂಡ ಜನರು ಸಾಮಾನ್ಯ ನಾಗರಿಕರು ಎಂದು ತಿಳಿದುಬಂದಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ತಲುಪಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಯೋತ್ಪಾದಕರು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಈ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಕ್ಟೋಬರ್ 31 ರಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಬಳಿಕ ಈ ದಾಳಿ ನಡೆದಿದೆ.
ಶ್ರೀನಗರದ ಲಾಲ್ ಚೌಕ್‌ನ ಮೌಲಾನಾ ಆಜಾದ್ ರಸ್ತೆಯಲ್ಲಿ ಗ್ರೆನೇಡ್ ದಾಳಿ ನಡೆಸಲಾಯಿತು. ಗ್ರೆನೇಡ್ ಸ್ಫೋಟ ಸಂಭವಿಸಿದಾಗ ಹಲವಾರು ಬೀದಿ ಬದಿ ವ್ಯಾಪಾರಿಗಳು ಮತ್ತು ಸ್ಥಳೀಯರು ಸ್ಥಳದಲ್ಲಿದ್ದರು. ಮುಗ್ಧ ಜನರನ್ನು ಗುರಿಯಾಗಿಸಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ನಿರ್ಧಾರದ ಸುಮಾರು ಮೂರು ತಿಂಗಳ ನಂತರ ಕಾಶ್ಮೀರ ಮತ್ತು ಲಡಾಖ್ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದ್ದು ಈ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ.
ಏತನ್ಮಧ್ಯೆ, ಗಾಯಗೊಂಡ ಎಲ್ಲರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಳೆದ 10 ದಿನಗಳಲ್ಲಿ ಇದು ಎರಡನೇ ಗ್ರೆನೇಡ್ ದಾಳಿಯಾಗಿದೆ. ಅಕ್ಟೋಬರ್ 28 ರಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಬಸ್ ನಿಲ್ದಾಣದ ಬಳಿಯ ಇಕ್ಬಾಲ್ ಮಾರುಕಟ್ಟೆ ಪ್ರದೇಶದಲ್ಲಿ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದರಿಂದ ಕನಿಷ್ಠ 19 ನಾಗರಿಕರು ಗಾಯಗೊಂಡಿದ್ದರು.
ಅಕ್ಟೋಬರ್ 26 ರಂದು ಶ್ರೀನಗರದಲ್ಲಿ ಭಯೋತ್ಪಾದಕರು ನಡೆಸಿದ ಮತ್ತೊಂದು ಗ್ರೆನೇಡ್ ದಾಳಿಯಲ್ಲಿ ಸಿಆರ್‌ಪಿಎಫ್‌ನ ಹೆಡ್ ಕಾನ್‌ಸ್ಟೆಬಲ್ ಗಂಭೀರ ಗಾಯಗೊಂಡಿದ್ದು, ಅರೆಸೈನಿಕ ಪಡೆಯ ಕನಿಷ್ಠ ಐದು ಮಂದಿ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.