ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಅಗ್ಗವಾಗಲಿವೆಯೇ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್?
ಮೂಲಗಳ ಪ್ರಕಾರ, ವಾಹನಗಳ ಟೈರ್ ಮತ್ತು ಸಿಮೆಂಟ್ ಮೇಲಿನ ಜಿಎಸ್‌ಟಿ ಅನ್ನು ಶೇ.28 ರಿಂದ ಶೇ.18ಕ್ಕೆ ಇಳಿಸುವ ಸಾಧ್ಯತೆ ಇದೆ.
ನವದೆಹಲಿ: ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಜಿಎಸ್‌ಟಿ ಕೌನ್ಸಿಲ್ 31ನೇ ಸಭೆ ಆರಂಭವಾಗಿದೆ. ಈ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಅನೇಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ವಾಹನಗಳ ಟೈರ್ ಮತ್ತು ಸಿಮೆಂಟ್ ಮೇಲಿನ ಜಿಎಸ್‌ಟಿ ಅನ್ನು ಶೇ.28 ರಿಂದ ಶೇ.18ಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ 1,200ಕ್ಕೂ ಹೆಚ್ಚಿನ ವಸ್ತುಗಳು ಮತ್ತು ಶೇ.99ರಷ್ಟು ಸೇವೆಗಳ ಮೇಲೆ ಶೇ.18ಕ್ಕಿಂತಲೂ ಕಡಿಮೆ ಜಿಎಸ್‌ಟಿ ಹೇರಲು ಉದ್ದೇಶಿಸಲಾಗಿದೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಹೀಗಾಗಿ ಈ ಸಭೆ ಬಳಿಕ ಸಾಮಾನ್ಯ ಜನರಿಗೆ ಹೆಚ್ಚಿನ ಪರಿಹಾರ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ವಸ್ತುಗಳು ಅಗ್ಗವಾಗುವ ಸಾಧ್ಯತೆ...
- ವಾಹನಗಳ ಟೈರ್ ಸೇರಿದಂತೆ 6 ಕ್ಕೂ ಹೆಚ್ಚು ವಸ್ತುಗಳ ದರ ಕಡಿಮೆ ಮಾಡುವ ನಿರೀಕ್ಷೆಯಿದೆ. ಈ ವಸ್ತುಗಳ ಜಿಎಸ್‌ಟಿಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಸುವ ಸಾಧ್ಯತೆಯಿದೆ.
- ಎಸಿ ಮತ್ತು ಸಿಮೆಂಟ್ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಸಾಧ್ಯತೆ.
- ಟಿವಿ, ಕಂಪ್ಯೂಟರ್ ಮತ್ತು ಪವರ್ ಬ್ಯಾಂಕ್ಗಳ ಮೇಲಿನ ಜಿಎಸ್ಟಿ ಕಡಿಮೆಗೊಳಿಸುವ ಸಾಧ್ಯತೆ.
- ಡಿಜಿಟಲ್ ಕ್ಯಾಮೆರಾಗಳು, ವಾಶಿಂಗ್ ಮಿಶಿನ್, ರೆಫ್ರಿಜರೇಟರ್, ಸೆಟಪ್ ಬಾಕ್ಸ್, ಮಾನಿಟರ್ಗಳು ಮತ್ತು ಪ್ರೊಜೆಕ್ಟರ್ಗಳ ಮೇಲಿನ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ.
ಸಿಮೆಂಟ್ ಮೇಲಿನ ಜಿಎಸ್ಟಿ ದರ ಕಡಿಮೆ ಮಾಡಿರುವುದರಿಂದ ಸರ್ಕಾರಕ್ಕೆ ವಾರ್ಷಿಕ 20,000 ಕೋಟಿ ರೂ. ಹೊರೆಯಾಗಲಿದೆ ಎನ್ನಲಾಗಿದೆ.