ಅಹಮದಾಬಾದ್ : 2017 ರ ಗುಜರಾತ್ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

`ಸಂಕಲ್ಪ ಪತ್ರ 2017' ಶೀರ್ಷಿಕೆಯಡಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. 


ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅರುಣ್ ಜೇಟ್ಲಿ, ಗುಜರಾತ್ ನ ಜಿಡಿಪಿ ದೇಶದ ಜಿಡಿಪಿಗಿಂತ ಹೆಚ್ಚಿದೆ. ಕಳೆದ ಐದು ವರ್ಷಗಳಲ್ಲಿ ಗುಜರಾತ್ ಶೇಕಡಾ 10ರ ಸರಾಸರಿಯಲ್ಲಿ ಜಿಡಿಪಿ ಅಭಿವೃದ್ಧಿ ದರವನ್ನು ದಾಖಲಿಸಿದೆ ಎಂದು ಹೇಳಿದರು. ಗುಜರಾತ್ ನಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳು ಸಾಂವಿಧಾನಿಕವಾಗಿ ಮತ್ತು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಅವರು ಟೀಕಿಸಿದರು.


ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಗುಜರಾತ್ ನಲ್ಲಿ ಬಿಜೆಪಿ ಪ್ರಣಾಳಿಕೆಯನ್ನೇ ಬಿಡುಗಡೆ ಮಾಡದೆ ಚುನಾವಣೆ ಎದುರಿಸಲಿದೆ ಎಂದುಕೊಳ್ಳಲಾಗಿತ್ತು. ಆದರೆ ಸಾಂಪ್ರದಾಯಕತೆಯನ್ನು ನೆಚ್ಚಿಕೊಂಡ ಬಿಜೆಪಿ ತಾನೂ ಪ್ರಣಾಳಿಕೆ ಬಿಡುಗಡೆ ಮಾಡಿದೆ.


ಡಿಸೆಂಬರ್ 4 ರಂದು ಗುಜರಾತ್ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಪ್ರಮುಖವಾಗಿ ರಾಜ್ಯದ ರೈತರಿಗೆ ಅಗತ್ಯವಾದ ಪರಿಹಾರ ಮತ್ತು ಬೆಂಬಲ ನೀಡುವುದಾಗಿ ಹೇಳಿತ್ತು. 


ಬುಡಕಟ್ಟು ಜನಾಂಗದವರಿಗೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಪ್ರಸ್ತುತ ಶೇಕಡಾ 49 ರಷ್ಟು ಮೀಸಲಾತಿಗೆ ಹಾನಿಯಾಗದಂತೆ, ಸಂವಿಧಾನದ 46 ನೇ ಅಧಿನಿಯಮದ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರವು ನೂತನ ಮಸೂದೆಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದೆ.