ಗುಜರಾತ್ ಚುನಾವಣೆ: ಅಮಿತ್ ಷಾ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ?
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿರುವ ಆನಂದಿಭೀನ್ ಪಟೇಲ್.
ಅಹ್ಮದಾಬಾದ್: ಈ ವರ್ಷದ ಆಗಸ್ಟ್ ನಲ್ಲಿ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನಾರಣಪುರ ವಿಧಾನ ಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಪ್ರಾರಂಭವಾಗಿವೆ.
ಏತನ್ಮಧ್ಯೆ ತಮ್ಮ ಕುಟುಂಬದಿಂದ ಯಾವುದೇ ಅಭ್ಯರ್ಥಿಯು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಈ ಸ್ಥಾನದಿಂದ ಬಿಜೆಪಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬುದು ಸ್ಪಷ್ಟವಾಗುತ್ತದೆ.
ಅದೇ ರೀತಿ ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಭೀನ್ ಪಟೇಲ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಪ್ರಸ್ತುತ ಘಾಟ್ದೋಡಿಯಾ ಕ್ಷೇತ್ರದಿಂದ ಶಾಸಕರಾಗಿರುವ ಅವರು ಮುಂಚಿತವಾಗಿಯೇ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರು. ಹಾಗಾಗಿ ಈ ಬಾರಿ ಬಿಜೆಪಿ ಈ ಕ್ಷೇತ್ರದಿಂದ ಮತ್ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ಸಹ ಕಾದುನೋಡಬೇಕಿದೆ.
ಏತನ್ಮಧ್ಯೆ, ನಾಮಪತ್ರ ಪ್ರಕ್ರಿಯೆಯ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರು ಟಿಕೆಟ್ ವಿತರಣೆಗಾಗಿ ಪಟ್ಟಿಯನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಆದರೆ ಅಭ್ಯರ್ಥಿಗಳಿಗೆ ಟಿಕೇಟ್ ಬಗ್ಗೆ ಯಾವುದೇ ಘೋಷಣೆ ನೀಡಿಲ್ಲದಿರುವುದರಿಂದ, ಟಿಕೇಟ್ ಆಕಾಂಕ್ಷಿಗಳಲ್ಲಿ ಆತಂಕದ ಛಾಯೆ ಆವರಿಸಿದೆ.