ಮೊಮ್ಮಗನಿಗೆ ಸ್ವಕ್ಷೇತ್ರ ಬಿಟ್ಟುಕೊಟ್ಟು ತುಮಕೂರಿನಲ್ಲಿ ಸೋಲುಂಡ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇನು?
ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು 5,96,127ಮತಗಳನ್ನು ಗಳಿಸಿ ಜಯ ಸಾಧಿಸಿದರೆ, ಹೆಚ್.ಡಿ.ದೇವೇಗೌಡರು 5,82,788 ಮತಗಳನ್ನು ಗಳಿಸಿ 13,339 ಮತಗಳ ಅಂತರದಿಂದ ಪರಾಭವಗೊಂಡರು.
ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ವಿರುದ್ಧ ಸೋಲನುಭವಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು 5,96,127ಮತಗಳನ್ನು ಗಳಿಸಿ ಜಯ ಸಾಧಿಸಿದರೆ, ಹೆಚ್.ಡಿ.ದೇವೇಗೌಡರು 5,82,788 ಮತಗಳನ್ನು ಗಳಿಸಿ 13,339 ಮತಗಳ ಅಂತರದಿಂದ ಪರಾಭವಗೊಂಡರು.
ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡರು, "ತಾವು ಸಮಾಜದ ಸುಧಾರಣೆಗಾಗಿ ದುಡಿಯುತ್ತಿದ್ದು, ತಮ್ಮ ಸಾರ್ವಜನಿಕ ಸೇವೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ. ತಮಗೆ ಮತದಾನ ಮಾಡಿದ ಮತದಾರರಿಗೆ, ಚುನಾವಣೆ ಸಂದರ್ಭದಲ್ಲಿ ದುಡಿದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಕಾರ್ಯಕರ್ತರಿಗೆ ಹಾಗೂ ತಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ನರೇಂದ್ರ ಮೋದಿ ಅವರಿಗೂ ದೇವೇಗೌಡರು ಶುಭ ಹಾರೈಸಿದ್ದಾರೆ.
ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಟ್ಟು, ತುಮಕೂರಿನಿಂದ ಸ್ಪರ್ಧಿಸಿದ್ದ ದೇವೇಗೌಡರಿಗೆ ಈ ಬಾರಿ ಮತದಾರರು ಕೈ ಬಿಟ್ಟಿದ್ದಾರೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿಯೇ ತುಮಕೂರಿನಿಂದ ದೇವೇಗೌಡರಿಗೆ ಟಿಕೆಟ್ ನೀಡಿಕೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಭಿನ್ನಾಭಿಪ್ರಾಯ ಮೂಡಿತ್ತು. ಆ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದ ಮುದ್ದಹನುಮೇಗೌಡರು ಟಿಕೆಟ್ ವಂಚಿತರಾದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಕಡೆಗೆ ಮಾತುಕತೆ ನಡೆಸಿ ಕಾಂಗ್ರೆಸ್ ನಾಯಕರು ಮನವೊಲಿಸಿದ ಬಳಿಕ ನಾಮಪತ್ರ ಹಿಂತೆಗೆದುಕೊಂಡಿದ್ದರು.