ನವದೆಹಲಿ: ಸಾವಿರಾರು ಕೋಟಿ ರೂ.ಗಳ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬಿಲಿಯನೇರ್ಗಳ ಸುದ್ದಿ ಒಂದೆಡೆಯಾದರೆ, ಮರಣಾನಂತರವೂ ಸಾಲ ಮರುಪಾವತಿ ಮಾಡಿದವರೂ ನಮ್ಮಲ್ಲಿದ್ದಾರೆ. ಅವರ್ಯಾರು ಅಂತ ತಿಳಿಯಬೇಕೆ? ಹಾಗಿದ್ದರೆ ಈ ಸ್ಟೋರಿ ಓದಿ...


COMMERCIAL BREAK
SCROLL TO CONTINUE READING

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಕೂಡ ಪಂಜಾಬ್ ನ್ಯಾಷನಲ್ ಬ್ಯಾಂಕ್'ನಿಂದ 5000 ರೂ.ಗಳ ಸಾಲ ಪಡೆದಿದ್ದರಂತೆ. ಆದರೆ ಆ ಸಾಲವನ್ನು ಶಾಸ್ತ್ರಿ ಅವರ ಮರಣಾನಂತರ ವರ್ಷಗಳಲ್ಲಿ ಅವರ ಹೆಂಡತಿ ಬ್ಯಾಂಕ್'ಗೆ ಮರುಪಾವತಿಸಿದರಂತೆ. ಈ ಘಟನೆಯನ್ನು ಈ ಸಂದರ್ಭದಲ್ಲಿ ನೆನೆಪಿಸಿದ್ದು, ಶಾಸ್ತ್ರಿ ಅವರ ಪುತ್ರ ಹಾಗೂ ಮಾಜಿ ಕೇಂದ್ರ ಸಚಿವ ಅನಿಲ್ ಕುಮಾರ್ ಶಾಸ್ತ್ರಿ ಅವರು ಒಮ್ಮೆ ಒಂದು ಪತ್ರಿಕೆಗೆ ನೀಡಿದ್ದ ಹೇಳಿಕೆ! 


"ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಾವು ಪ್ರಧಾನಿಯಾಗಿದ್ದರೂ ಕೂಡ ಸ್ವಂತ ಕಾರನ್ನು ಹೊಂದಿರಲಿಲ್ಲ. ಆದರೆ ಕುಟುಂಬದ ಸದಸ್ಯರ ಒತ್ತಡಕ್ಕೆ ಮಣಿದು, ಕಾರು ಖರೀದಿಸಲು ಒಪ್ಪಿ, ಒಂದು ಫಿಯೆಟ್ ಕಾರಿನ ಬೆಲೆ ತಿಳಿಯಲು ತನ್ನ ಕಾರ್ಯದರ್ಶಿಗೆ ತಿಳಿಸಿದರು. ಅದರ ಬೆಲೆ 12,000 ರೂ. ಆಗಿತ್ತು. ಆದರೆ ಶಾಸ್ತ್ರಿ ಅವರ ಬಳಿ ಬ್ಯಾಂಕ್'ನಲ್ಲಿ ಇದ್ದುದು ಕೇವಲ 7000 ರೂ. ಹಾಗಾಗಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್'ನಲ್ಲಿ 5000 ರೂ.ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದರು. ಅದಾದ 2 ಗಂಟೆಯೊಳಗೇ ಶಾಸ್ತ್ರಿ ಅವರಿಗೆ ಸಾಲ ಮಂಜೂರಾಯಿತು. 


ಆಗ ಶಾಸ್ತ್ರಿ ಅವರಿಗೆ ಕಾಡಿದ ಪ್ರಶ್ನೆ ಎಂದರೆ, ಈ ಬ್ಯಾಂಕ್ ಇತರ ಗ್ರಾಹಕರಿಗೂ ಶೀಘ್ರಗತಿಯಲ್ಲಿ ಸಾಲ ಮಂಜೂರು ಮಾಡುತ್ತಿದೆಯೇ ಎಂಬುದು! ಆ ಕೂಡಲೇ ಬ್ಯಾಂಕ್ ಅಧಿಕಾರಿಯನ್ನು ಈ ಬಗ್ಗೆ ಪ್ರಶ್ನಿಸಿ, ಬ್ಯಾಂಕಿನ ಎಲ್ಲಾ ಗ್ರಾಹಕರ ಅಗತ್ಯತೆಗಳನ್ನು ಸಕಾಲದಲ್ಲಿ ಪೂರೈಸಲು ಅಧಿಕಾರಿಗಳಿಗೆ ಸಲಹೆ ನೀಡಿದರು" ಎಂದು ಅನಿಲ್ ಶಾಸ್ತ್ರಿ ಹೇಳಿಕೊಂಡಿದ್ದರು. 


ಆದರೆ, ಸಾಲ ಮರುಪಾವತಿಸುವ ಮುನ್ನವೇ ಶಾಸ್ತ್ರಿ ನಿಧನರಾದರು. ಅವರ ಮರಣದ ನಂತರ ಬ್ಯಾಂಕ್ ಅವರ ಹೆಂಡತಿ, ಲಲಿತಾ ಶಾಸ್ತ್ರಿ ಅವರನ್ನು ಸಾಲ ಮರುಪಾವತಿಸುವಂತೆ ಕೇಳಿದಾಗ, ಅವರು ತಮ್ಮ ಪತಿಯ ಸಾವಿನ ಬಳಿಕ ತಮಗೆ ದೊರೆಯುತ್ತಿದ್ದ ಪಿಂಚಣಿ ಹಣವನ್ನು ಬ್ಯಾಂಕ್'ಗೆ ಪಾವತಿಸಿ ಸಾಲ ಮರುಪಾವತಿಸಿದರು.


ಲಾಲ್ ಬಹದ್ದೂರ್ ಶಾಸ್ತ್ರಿ ಅವರ 1964 ಮಾದರಿಯ DLE 6 ಸಂಖ್ಯೆಯ ಫಿಯೆಟ್ ಕಾರು ಕ್ರೀಮ್ ಬಣ್ಣದ್ದಾಗಿತ್ತು. ಈಗ ಅದನ್ನು ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕದಲ್ಲಿ ಮೋತಿಲಾಲ್ ನೆಹರೂ ಮಾರ್ಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 


ಈ ಘಟನೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 



ಇತ್ತೀಚಿಗೆ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್'ನಲ್ಲಿ ನಡೆದಿರುವ 11,000 ಕೋಟಿ ರೂ. ವಂಚನೆ ಪ್ರಕರಣ ಇಡೀ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣದ ಆರೋಪಿಗಳಾದ ಬಿಲಿಯನೇರ್ ನೀರವ್ ಮೋದಿ ಮತ್ತು ಗೀತಾಂಜಲಿ ಜೆಮ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೋಕ್ಸಿ ಇಬ್ಬರೂ ತಲೆಮರೆಸಿಕೊಂಡಿದ್ದು, ಇವರಿಗಾಗಿ ಸಿಬಿಐ ತೀವ್ರ ಹುಡುಕಾಟ ಆರಂಭಿಸಿದೆ.