ನವದೆಹಲಿ: ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯನ್ನು ಬುಧವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.


COMMERCIAL BREAK
SCROLL TO CONTINUE READING

ಸೋಮವಾರ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತ್ತು. ಅದರಂತೆ ಇಂದು ಬೆಳಿಗ್ಗೆ 11 ಗಂಟೆಯಿಂದಲೇ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿ ಎನ್.ವಿ.ರಾಮನ್ ನೇತೃತ್ವದ ತ್ರಿಸದಸ್ಯ ಪೀಠ ನಾಳೆಗೆ ಮುಂದೂಡಿದ್ದು, ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ತೀರ್ಪಿನತ್ತ ಕೇಂದ್ರೀಕರಿಸಿದೆ.


ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿ, ಶಾಸಕರ ಅನರ್ಹತೆಯಿಂದಾಗಿ ತೆರವಾಗಿರುವ 17 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಚುನಾವಣಾ ಆಯೋಗ ಉಪಚುನಾವಣೆ ಅಧಿಸೂಚನೆ ಹೊರಡಿಸಿದೆ. ಅದರಂತೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದೆ. ಹಾಗಾಗಿ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಕೂಡಲೇ ಇತ್ಯರ್ಥಗೊಳಿಸಿ ಎಂದು ಹೇಳಿದರು.


ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆ ಈ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಬೇರೆ ಕಾರಣ ನೀಡಿ ರಾಜೀನಾಮೆ ತಿರಸ್ಕರಿಸಿ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದು ಸರಿಯಲ್ಲ. ಅಂತೆಯೇ ಚುನಾವಣೆಗೆ ಸ್ಪರ್ಧಿಸುವುದಕ್ಕೂ ನಿಷೇಧ ಹೇರಲಾಗಿದೆ. ಹೀಗಾಗಿ ಶೀಘ್ರದಲ್ಲಿ ಅರ್ಜಿ ವಿಚಾರಣೆ ಇತ್ಯರ್ಥಗೊಳಿಸಿ, ಇಲ್ಲವೇ ಎರಡರಿಂದ ಮೂರೂ ತಿಂಗಳು ಉಪಚುನಾವಣೆಯನ್ನು ಮುಂದೂಡಿ, ಇಲ್ಲವೇ ಸ್ಪೀಕರ್ ಆದೇಶಕ್ಕೆ ತಡೆ ನೀಡಿ ಅನರ್ಹಗೊಂಡಿರುವ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಎಂದು ವಾದ ಮಂಡಿಸಿದರು. 


ಬೆಳಿಗ್ಗೆಯಿಂದ ಸಂಜೆ 4 ಗಂಟೆವರೆಗೆ ನಡೆದ ಸುದೀರ್ಘ ವಾದ ಮಂಡನೆ ಬಳಿಕ ನ್ಯಾಯಾಲಯ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ. ಕಾಂಗ್ರೆಸ್ ಪರ ವಕೀಲರು ನಾಳೆ ವಾದ ಮಂಡಿಸಲಿದ್ದಾರೆ.