ಪುಣೆಯಲ್ಲಿ ಭಾರಿ ಮಳೆಯಿಂದ 10 ಸಾವು, 150 ಮನೆಗಳಿಗೆ ಹಾನಿ, ಶಾಲಾ ಕಾಲೇಜುಗಳಿಗೆ ರಜೆ
ಮಳೆಯಿಂದಾಗಿ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ವ್ಯಕ್ತಪಡಿಸಿದ್ದು, ಪ್ರವಾಹ ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನೂ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ನವದೆಹಲಿ: ಮಹಾರಾಷ್ಟ್ರದ ಪುಣೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಗುರುವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪುಣೆ ಜಿಲ್ಲಾಧಿಕಾರಿ ನೇವಲ್ ಕಿಶೋರ್ ರಾಮ್ ಪುಣೆ ನಗರ, ಪುರಂದರ್, ಬಾರಾಮತಿ, ಭೋರ್ ಮತ್ತು ಹವೇಲಿ ತಹಸಿಲ್ಸ್‌ನ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಸಹಕಾರ್‌ನಗರ ಪ್ರದೇಶದಲ್ಲಿ ಬುಧವಾರ ಗೋಡೆ ಕುಸಿದು ಆರು ಜನರು ಸಾವನ್ನಪ್ಪಿದ್ದರೆ, ಇತರೆಡೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಪ್ರಮಾಣದಲ್ಲಿ ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ 150 ಮನೆಗಳಿಗೆ ಹಾನಿಯಾಗಿದೆ. ಪುಣೆಯ ಸಿಂಹಗಡ್ ರಸ್ತೆ ಬಳಿಯ ಕಾಲುವೆಯೊಂದರಲ್ಲಿ ಸಿಲುಕಿಕೊಂಡಿದ್ದ ವಾಹನದಿಂದ ಎನ್‌ಡಿಆರ್‌ಎಫ್ ಪಡೆ ಶವವೊಂದನ್ನು ಹೊರತೆಗೆದಿದ್ದಾರೆ.
ಮಳೆಯಿಂದಾಗಿ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ವ್ಯಕ್ತಪಡಿಸಿದ್ದು, ಪ್ರವಾಹ ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನೂ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಮೂರು ಎನ್‌ಡಿಆರ್‌ಎಫ್ ತಂಡಗಳನ್ನು ಪುಣೆ ಮತ್ತು ಬಾರಾಮತಿಯಲ್ಲಿ ನಿಯೋಜಿಸಲಾಗಿದೆ.