ತಮಿಳುನಾಡುನಲ್ಲಿ ಭಾರೀ ಮಳೆ: 7 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ
ಈ ಪ್ರದೇಶದಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 2 ರಂದು ನಿಗದಿಯಾಗಿದ್ದ ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಅನ್ನಾ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಚೆನ್ನೈ: ತಮಿಳುನಾಡಿನಲ್ಲಿ ಕಳೆದೆರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿದ್ದಾರೆ. ಏತನ್ಮಧ್ಯೆ, ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ಏಳು ಜಿಲ್ಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಪ್ರದೇಶದಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 2 ರಂದು ನಿಗದಿಯಾಗಿದ್ದ ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಅನ್ನಾ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೇ ಕಾರಣದಿಂದ ಪುದುಚೇರಿಯ ಶಾಲೆಗಳಲ್ಲಿ ಸೋಮವಾರವೂ ರಜಾದಿನವನ್ನು ಘೋಷಿಸಲಾಗಿದೆ.
ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು, "ತಿರುವಳ್ಳೂರು, ತೂತುಕುಡಿ ಮತ್ತು ರಾಮನಾಥಪುರಂನ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸೋಮವಾರ ರಜಾದಿನವನ್ನು ಘೋಷಿಸಲಾಗಿದೆ. ಚೆಂಗಲ್ಪಟ್ಟು, ಕಾಂಚೀಪುರಂ, ಕಡಲೂರು ಮತ್ತು ಚೆನ್ನೈನಲ್ಲಿ ಶಾಲೆಗಳಿಗೆ ಮಾತ್ರ ರಜೆಯನ್ನು ಘೋಷಿಸಲಾಗಿದೆ" ಎಂದು ಹೇಳಿದರು.
ಏತನ್ಮಧ್ಯೆ, ಭಾರಿ ಮಳೆಯ ನಂತರ ಕಡಲೂರು ಜಿಲ್ಲೆಯ ತಗ್ಗು ಪ್ರದೇಶಗಳಿಂದ ಸುಮಾರು 800 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಸಚಿವ ಆರ್.ಬಿ. ಉದಯಕುಮಾರ್ ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಭಾರಿ ಮಳೆಯಿಂದಾಗಿ ರಾಮೇಶ್ವರಂನ ಮುತ್ತುರಾಮಲಿಂಗ ತೇವರ್ ನಗರದಲ್ಲಿ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಎಎನ್‌ಐ ಜೊತೆ ಮಾತನಾಡಿದ ರಾಮೇಶ್ವರಂ ನಿವಾಸಿ ದೇವಿ, "ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ವಸತಿ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಆದಾಗ್ಯೂ ಆಡಳಿತದಿಂದ ಯಾವುದೇ ಸಹಾಯ ದೊರೆತಿಲ್ಲ" ಎಂದು ಹೇಳಿದರು.
ಇನ್ನೊಬ್ಬ ನಿವಾಸಿಯು, "ಕಳೆದ ಎರಡು ದಿನಗಳಿಂದ ನಿರಂತರ ಮಳೆಯ ನಂತರ ನೀರು ನಮ್ಮ ಮನೆಗಳಿಗೆ ಪ್ರವೇಶಿಸಿದೆ. ಇದರಿಂದಾಗಿ ನಾವು ಮನೆಯೊಳಗೆ ಹೋಗಲೂ ಕೂಡ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ನಮಗೆ ಸಹಾಯ ಮಾಡುವಂತೆ ನಾವು ಆಡಳಿತವನ್ನು ಒತ್ತಾಯಿಸುತ್ತಿದ್ದೇವೆ" ಎಂದರು.
ಮಂಟಪಂನ ಕರಾವಳಿ ಪ್ರದೇಶದಲ್ಲಿ ನಿನ್ನೆ ರಾತ್ರಿ ತೀರಕ್ಕೆ ಅಪ್ಪಳಿಸಿ ಬಾರೀ ಅಲೆಯಿಂದಾಗಿ ಆರು ಮೀನುಗಾರಿಕಾ ದೋಣಿಗಳು ಹಾನಿಗೊಳಗಾಗಿರುವ ಬಗ್ಗೆ ವರದಿಯಾಗಿದೆ.
ಪುದುಚೇರಿಯ ಶಂಕರಬರಾನಿ ನದಿಯ ದಡದಲ್ಲಿರುವ ಗ್ರಾಮಸ್ಥರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ವೀಡೂರ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಬೇಕಾಗಿರುವುದರಿಂದ ಕಂದಾಯ ಮತ್ತು ವಿಪತ್ತು ನಿರ್ವಹಣೆಯಿಂದ ಭಾನುವಾರ ಈ ಆದೇಶ ಹೊರಡಿಸಲಾಗಿದೆ.
ಐಎಂಡಿ ವರದಿಯ ಪ್ರಕಾರ, ಸಕ್ರಿಯ ಈಸ್ಟರ್ ಅಲೆಯ ಪ್ರಭಾವದಿಂದ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.