ನವದೆಹಲಿ: ಪಾಕ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೋಯಿಬಾ ಮತ್ತು ಜೈಶ್-ಇ ರಾಷ್ಟ್ರ ರಾಜಧಾನಿ ನವದೆಹಲಿಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ದೆಹಲಿ-ಎನ್ಸಿಆರ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಪಾಕ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ಕೆಲ ಸದಸ್ಯರು ರಾಷ್ಟ್ರ ರಾಜಧಾನಿಯೊಳಗೆ ನುಸುಳಿದ್ದು, ಹಬ್ಬದ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ದೆಹಲಿ ಪೊಲೀಸರಿಗೆ ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರ ವಿಶೇಷ ತಂಡ ಬುಧವಾರ ತಡರಾತ್ರಿಯಿಂದ ನಗರದ ಕೆಲವೆಡೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದೆ. 


ಐಎಸ್ಐನ ಸೂಚನೆಯಂತೆ, ಜಮ್ಮು-ಕಾಶ್ಮೀರದ ಹೊರಗೆ ಭಯೋತ್ಪಾದಕ ದಾಳಿ ನಡೆಸಲು ಜೈಷ್ ಇ ಮೊಹಮ್ಮದ್ ಸಂಘಟನೆ ಆತ್ಮಾಹುತಿ ಬಾಂಬರ್ ಗಳನ್ನೂ ನೇಮಿಸಿಕೊಳ್ಳುತ್ತಿದೆ ಎನ್ನಲಾಗಿದೆ. ಅಲ್ಲದೆ, ದೆಹಲಿ-ಎನ್‌ಸಿಆರ್‌ನಲ್ಲಿ ಮಾನವ ಆತ್ಮಹತ್ಯಾ ಬಾಂಬರ್‌ಗಳು ಅಥವಾ ಸ್ಫೋಟಕ ತುಂಬಿದ ವಾಹನಗಳನ್ನು ಬಳಸಿ ದೊಡ್ಡ ದಾಳಿ ನಡೆಸಲು ಐಎಸ್‌ಐ ಈ ಭಯೋತ್ಪಾದಕ ಗುಂಪುಗಳಿಗೆ ಆದೇಶ ನೀಡಬಹುದು ಎಂದು ಗುಪ್ತಚರ ಸಂಸ್ಥೆ ಸೂಚಿಸಿದೆ. 


ಇದೇ ವೇಳೆ, ಜಮ್ಮು, ಅಮೃತಸರ, ಪಠಾಣ್‌ಕೋಟ್, ಜೈಪುರ, ಗಾಂಧಿನಗರ, ಕಾನ್ಪುರ ಮತ್ತು ಲಖನೌ ಸೇರಿದಂತೆ ಒಟ್ಟು 30 ನಗರಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.