ಅಮೃತಸರ: ಮುಂದಿನ ಎರಡು ದಿನಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶುಕ್ರವಾರ ರಾತ್ರಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಹವಾಮಾನ ಇಲಾಖೆಯು ನೀಡಿರುವ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಗಿದೆ. ಭಾರೀ ಮಳೆಯಿಂದ ಉಂಟಾಗುವ ಯಾವುದೇ ಅಹಿತಕರ ಪರಿಸ್ಥಿತಿಯ ಸಂದರ್ಭದಲ್ಲಿ ಜನರ ರಕ್ಷಣೆ ಮತ್ತು ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.


ಕಂದಾಯ, ಒಳಚರಂಡಿ, ಆರೋಗ್ಯ, ಆಹಾರ ಮತ್ತು ಪಶುಸಂಗೋಪನಾ ಇಲಾಖೆಗಳ ಕ್ಷೇತ್ರ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿರುವ ಮುಖ್ಯಮಂತ್ರಿ ಸಿಂಗ್ ಅವರು, ಅಗತ್ಯವಿದ್ದಾಗ ಮತ್ತು ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗಾಗಿ ಕ್ರಿಯಾ ಯೋಜನೆಯೊಂದಿಗೆ ಸಿದ್ಧರಾಗಿರಿ ಎಂದು ನಿರ್ದೇಶಿಸಿದ್ದಾರೆ.


ಶುಕ್ರವಾರ ಪಂಜಾಬಿನ ಭಕ್ರ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾದ ಕಾರಣ, ಹೆಚ್ಚುವರಿ ನೀರನ್ನು ಹೊರಹಾಕಲು ಅಣೆಕಟ್ಟಿನ ಎಲ್ಲಾ 4 ಗೇಟುಗಳನ್ನು ತೆರೆದು ನೀರು ಹರಿಸಲಾಗಿದ್ದು, ಇದು ರಾಜ್ಯದ ನದಿಗಳ ನೀರಿನ ಮಟ್ಟವನ್ನು ಹೆಚ್ಚಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.


ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾದ ಕಾರಣ ಶುಕ್ರವಾರ ಜಲಾಶಯದ ನೀರಿನ ಮಟ್ಟ 1,674 ಅಡಿ ತಲುಪಿತ್ತು. ಈ ಹಿನ್ನೆಲೆಯಲ್ಲಿ ಭಕ್ರ ಅಣೆಕಟ್ಟಿನಿಂದ 55,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಸಟ್ಲೆಜ್ ನದಿ ದಂಡೆ ಮತ್ತು ಜಲಂಧರ್ ಜಿಲ್ಲೆಯ ತಗ್ಗು ಪ್ರದೇಶಗಳ ಸಮೀಪ ವಾಸಿಸುವ ಜನರು ಎಚ್ಚರ ವಹಿಸಲು ಅಧಿಕಾರಿಗಳು ತಿಳಿಸಿದ್ದಾರೆ.


ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯಾವ ಅಧಿಕಾರಿಯೂ ರಜೆ ತೆಗೆದುಕೊಳ್ಳಬಾರದು ಎಂದು ಸಿಎಂ ಆದೇಶಿಸಿದ್ದಾರೆ.