ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 27 ವರ್ಷ; ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್
ವರದಿಗಳ ಪ್ರಕಾರ, ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಆಡಳಿತವು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವ ಮೂಲಕ ಅಯೋಧ್ಯೆಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಲಕ್ನೋ: ಇಂದಿಗೆ(ಡಿಸೆಂಬರ್ 6) ಬಾಬರಿ ಮಸೀದಿ ಧ್ವಂಸ ಪ್ರಕರಣ ನಡೆದು 27 ವರ್ಷಗಳು ಉರುಳಿವೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವರದಿಗಳ ಪ್ರಕಾರ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು ಅಯೋಧ್ಯೆಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಮಿಶ್ರ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಜಾಗರೂಕರಾಗಿರಲು ಮತ್ತು ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. ಟ್ವಿಟರ್ ಅಥವಾ ಫೇಸ್‌ಬುಕ್ ಪೋಸ್ಟ್‌ಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಸಿದೆ.
ಅಯೋಧ್ಯೆ(Ayodhya) ಎಸ್‌ಎಸ್‌ಪಿ ಆಶಿಶ್ ತಿವಾರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇಡೀ ಜಿಲ್ಲೆಯನ್ನು ನಾಲ್ಕು ಜೊನ್ ಗಳು, 10 ಸೆಕ್ಟರ್ ಗಳು ಮತ್ತು 14 ಉಪ ವಲಯಗಳಾಗಿ ವಿಂಗಡಿಸಲಾಗಿದೆ ಎಂದು ತಿಳಿಸಿದರು.
"ಜೋನ್ ಗಳಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿಗಾ ವಹಿಸಲಿದ್ದಾರೆ. ಅದೇ ಸಂದರ್ಭದಲ್ಲಿ ಸೆಕ್ಟರ್ ಗಳ ಮೇಲ್ವಿಚಾರಣೆ ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿಯಾಗಿದೆ. ಉಪ ವಲಯಗಳನ್ನು ಎಸ್‌ಎಚ್‌ಒ ಮಟ್ಟದ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳುತ್ತಾರೆ" ಎಂದು ಅವರು ಹೇಳಿದರು.
"ಸಶಸ್ತ್ರ ಪೊಲೀಸರೊಂದಿಗೆ 78 ಸ್ಯಾಂಡ್‌ಬ್ಯಾಗ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಸಂಚಾರವನ್ನು ನಿಯಂತ್ರಿಸಲು ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. 269 ಪೊಲೀಸ್ ಪಿಕೆಟ್‌ಗಳು ಸೂಕ್ಷ್ಮ ಪ್ರದೇಶಗಳಲ್ಲಿವೆ" ಎಂದು ತಿವಾರಿ ಮಾಹಿತಿ ನೀಡಿದರು. ತೊಂದರೆ ನೀಡುವಂತಹ 305 ಜನರನ್ನು ಗುರುತಿಸಲಾಗಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ, ಒಂಬತ್ತು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದರು.
"ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು, 10 ತಾತ್ಕಾಲಿಕ ಜೈಲುಗಳನ್ನು ನಿರ್ಮಿಸಲಾಗಿದೆ". ವಿಧ್ವಂಸಕ ವಿರೋಧಿ ತಂಡಗಳು ಹೋಟೆಲ್, ಧರ್ಮಶಾಲಾ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಪರಿಶೀಲಿಸುತ್ತಿವೆ ಎಂದವರು ಮಾಹಿತಿ ನೀಡಿದರು.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಜನರ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಲಾಗಿದೆ. ಯಾವುದೇ ವದಂತಿಗಳಿಗೆ ಬಲಿಯಾಗದಂತೆ ಮತ್ತು ಪ್ರದೇಶದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳದಂತೆ ಸಾರ್ವಜನಿಕರನ್ನು ಕೋರಲಾಗಿದೆ ಎಂದವರು ಹೇಳಿದರು.
ಏತನ್ಮಧ್ಯೆ, ಬಾಬರಿ ಮಸೀದಿ ಧ್ವಂಸ ಪ್ರಕರಣದ 27 ವರ್ಷದ ಸಂದರ್ಭದಲ್ಲಿ ಡಿಸೆಂಬರ್ 6 ರಂದು ಸಮುದಾಯದ ಸ್ಥಳೀಯ ಅಂಗಡಿಯವರು ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಮತ್ತು ಆ ದಿನವನ್ನು ಕಪ್ಪು ದಿನವನ್ನಾಗಿ ಆಚರಿಸುವಂತೆ ಮುಸ್ಲಿಂ ಸಂಘಟನೆಯೊಂದು ಕರೆ ನೀಡಿರುವ ಹಿನ್ನಲೆಯಲ್ಲಿ ಬರೇಲಿ ಜಿಲ್ಲೆಯಲ್ಲಿಯೂ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ.''
ಅಖಿಲ ಭಾರತ ತಾಂಜಿಮ್ ಉಲಾಮಾ-ಇ-ಇಸ್ಲಾಂ (AITUI) ಸಂಘಟನೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಕರೆ ನೀಡಿದ್ದು, ಇದು ಹಲವಾರು ಮುಸ್ಲಿಂ ಸಂಘಟನೆಗಳೊಂದಿಗೆ ಪ್ರತಿಭಟನೆಯನ್ನು ಯೋಜಿಸಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಜ್ಞಾಪಕ ಪತ್ರವನ್ನು ಕಳುಹಿಸಲು ಅವರು ಯೋಜಿಸಿದ್ದಾರೆ ಎನ್ನಲಾಗಿದೆ.
ನವೆಂಬರ್ 9 ರಂದು ಅಯೋಧ್ಯೆ ತೀರ್ಪಿನ ದಿನದಂದು ಕೈಗೊಂಡಂತೆ ವಿಭಾಗದ ಎಲ್ಲಾ ಒಂಬತ್ತು ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಜಾಗರೂಕತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ತಿಳಿಸಲಾಗಿದೆ ಎಂದು ಬರೇಲಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅವಿನಾಶ್ ಚಂದ್ರ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮವಾದಾಗಿನಿಂದ, ಹಿಂದೂಗಳು ಡಿಸೆಂಬರ್ 6 ಅನ್ನು 'ಶೌರ್ಯ ದಿವಾಸ್' ಎಂದು ಆಚರಿಸಿದರೆ, ಮುಸ್ಲಿಂ ಸಮುದಾಯ ಇದನ್ನು 'ಬಾಬರಿ ಶಹಾದತ್ ದಿವಸ್' ಎಂದು ಆಚರಿಸುತ್ತಾರೆ.
ಆದಾಗ್ಯೂ, ನವೆಂಬರ್ 9 ರಂದು ಅಯೋಧ್ಯೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ, ಎರಡೂ ಸಮುದಾಯಗಳು ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವ ಮೂಲಕ ಇಡೀ ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿತು.
ಇದರ ಹೊರತಾಗಿಯೂ, ದುಷ್ಕರ್ಮಿಗಳು ಧಾರ್ಮಿಕ ಭಾವನೆಯನ್ನು ಪ್ರಚೋದಿಸುವುದನ್ನು ತಡೆಯಲು ಆಡಳಿತವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ.