ಹಿಮಾಚಲ: ರಸ್ತೆಗೆ ಬೇಡಿಕೆ ಇಟ್ಟು ಚುನಾವಣೆ ಬಹಿಷ್ಕರಿಸಲು ಮುಂದಾದ ಗ್ರಾಮಸ್ಥರು
ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮತ್ತ ಬರುವ ರಾಜಕಾರಣಿಗಳು ನಮ್ಮ ಗ್ರಾಮವನ್ನು ಉತ್ತಮ ರಸ್ತೆಯೊಂದಿಗೆ ಸಂಪರ್ಕಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಮುಂದಿನ ಚುನಾವಣೆವರೆಗೂ ಯಾರೂ ಕೂಡ ಇತ್ತ ತಲೆಯೂ ಹಾಕುವುದಿಲ್ಲ.
ಧರ್ಮಶಾಲಾ (ಹಿಮಾಚಲ ಪ್ರದೇಶ): ತಮ್ಮ ಗ್ರಾಮದಲ್ಲಿ ರಸ್ತೆ ನಿರ್ಮಿಸದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಾರಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಲಾಹರು ಟೀಕಾ ಗ್ರಾಮದ ನಿವಾಸಿಗಳು ನಿರ್ಧರಿಸಿದ್ದಾರೆ. ಮತ ಕೇಳಲು ಯಾವುದೇ ರಾಜಕಾರಣಿಗಳು ಗ್ರಾಮಕ್ಕೆ ಕಾಲಿಡದಂತೆ ಗ್ರಾಮಸ್ಥರು ತಮ್ಮ ಹಳ್ಳಿಯ ಸಾಕಷ್ಟು ಕಡೆಗಳಲ್ಲಿ ಹಲವಾರು ಬ್ಯಾನರ್ಗಳನ್ನು ಹಾಕಿದ್ದಾರೆ.
"ವ್ಯವಸ್ಥೆಯಿಂದ ನಾವು ಬಹಳ ದಣಿದಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮತ್ತ ಬರುವ ರಾಜಕಾರಣಿಗಳು ನಮ್ಮ ಗ್ರಾಮವನ್ನು ಉತ್ತಮ ರಸ್ತೆಯೊಂದಿಗೆ ಸಂಪರ್ಕಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಮುಂದಿನ ಚುನಾವಣೆವರೆಗೂ ಯಾರೂ ಕೂಡ ಇತ್ತ ತಲೆಯೂ ಹಾಕುವುದಿಲ್ಲ. ಗ್ರಾಮದಲ್ಲಿ ಸೂಕ್ತ ರಸ್ತೆ ಸೌಲಭ್ಯ ಇಲ್ಲದ ಕಾರಣ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವುದೂ ಕೂಡ ನಮಗೆ ಕಷ್ಟವಾಗಿದೆ ಎಂದು ಗ್ರಾಮಸ್ಥರಾದ ರೀಟಾ ದೇವಿ ಹಳ್ಳಿಗರ ಬವಣೆಯನ್ನು ತೋಡಿಕೊಂಡಿದ್ದಾರೆ.
150 ಮೀಟರ್ಗಳಷ್ಟು ಸಣ್ಣ ಪ್ಯಾಚ್ ರಸ್ತೆಯಲ್ಲಿ ದೀರ್ಘಕಾಲದಿಂದ ಒದ್ದಾಡುತ್ತಿರುವ ಹಳ್ಳಿಗರ ಸಮಸ್ಯೆಗಳನ್ನು ಕೊನೆಗೊಳಿಸಬೇಕೆಂದು ನಾವು ಬಯಸುತೇವೆ. "ರೋಗಿಗಳು ಮತ್ತು ಗರ್ಭಿಣಿ ಮಹಿಳೆಯರನ್ನು ಮುಖ್ಯ ರಸ್ತೆಯ ತನಕ ನಾವು ಕೊಂಡೊಯ್ಯಲು ಪ್ರಯಾಸವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ನಾವು ಪ್ರಸ್ತುತ ಮತ್ತು ಹಿಂದಿನ ಶಾಸಕರಿಗೆ ದೂರು ನೀಡಿದ್ದೆವು, ಆದರೆ ಪ್ರಯೋಜನವಾಗಲಿಲ್ಲ. ಪ್ರತಿಯೊಬ್ಬರೂ ನಮ್ಮ ಮತಗಳಿಗಾಗಿ ಮಾತ್ರ ನಮ್ಮತ್ತ ಬರುತ್ತಾರೆ. ಆದರೆ ನಮಗೆ ಅಗತ್ಯವಿರುವ ರಸ್ತೆಯ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಅವರು ಭರವಸೆಯನ್ನು ನೀಡುತ್ತಾರೆ," ಎಂದು ಮತ್ತೊಂದು ಸ್ಥಳೀಯ ಕಾರ್ತಾರ್ ಸಿಂಗ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರಸ್ತೆಗಳನ್ನು ನಿರ್ಮಿಸುವವರೆಗೂ ನಾವು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ" ಎಂದು ಸಿಂಗ್ ಹೇಳಿದ್ದಾರೆ. ಹಿಮಾಚಲ ಪ್ರದೇಶವು 4 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ, ಅಲ್ಲಿ ಮೇ 19 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೇ 23 ರಂದು ಮತಗಳ ಎಣಿಕೆ ನಡೆಯಲಿದೆ.