ನವದೆಹಲಿ:  ಹಿಂದಿ ಐಕ್ಯತೆಯತ್ತ ಕೊಂಡೊಯ್ಯುವ ಭಾಷೆ, ಹಾಗೆಂದ ಮಾತ್ರಕ್ಕೆ ಪ್ರಾದೇಶಿಕ  ಭಾಷೆಗಳ ಮೇಲೆ ಸವಾರಿ ಮಾಡುವುದು ಎಂದು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ 'ಹಿಂದಿ ದಿವಸ್' ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯಿಸಿರುವ ಸದಾನಂದ ಗೌಡ ಅವರು, ಅಮಿತ್ ಷಾ ಅವರು ಹಿಂದಿ ಭಾಷೆಯ ಬಗ್ಗೆ ಭಾಶಾಭಿಮಾನದಿಂದ ಮಾತನಾಡಿದ್ದಾರೆ. ಅಷ್ಟಕ್ಕೂ ಇದರಲ್ಲಿ ತಪ್ಪೇನಿದೆ. ನಾನೂ ಸಹ ಕನ್ನಡ ಭಾಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ನಾನೂ ಕೂಡ ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಮಾತನಾಡಿ, ಕನ್ನಡ ಭಾಷೆಗೆ ಉತ್ತೇಜನ ನೀಡಬೇಕೆಂದು ಮನವಿ ಮಾಡುತ್ತಿದ್ದೆ ಎಂದಿದ್ದಾರೆ. 


"ಹಿಂದಿ ದೇಶವನ್ನು ಐಕ್ಯತಯತ್ತ ಕೊಂಡೊಯ್ಯುವ ಭಾಷೆ. ಆಹಾಗಂದ ಕಾರಣಕ್ಕೆ ಅದು ಇತರ ಭಾಷೆಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ ಎಂದಲ್ಲ. ಬಹಳ ಹಿಂದಿನಿಂದಲೂ ನಾವು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡು ಬಂದಿದ್ದೇವೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಕಳೆದ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿ ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡುವುದಾಗಿ ಹೇಳಿದ್ದಾರೆ" ಎಂದು ಸದಾನಂದ ಗೌಡ ತಿಳಿಸಿದರು.


ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಷಾ, ವೈವಿಧ್ಯತೆಯಲ್ಲಿ ಏಕತೆಯು ಭಾರತದ ವಿಶಿಷ್ಟ ಲಕ್ಷಣವಾಗಿದ್ದರೂ, ಸಾಂಸ್ಕೃತಿಕವಾಗಿ ಏಕೀಕರಿಸುವ ಅಂಶವಾಗಿ ಸಾಮಾನ್ಯ ಭಾಷೆ ಅಗತ್ಯವಿದೆ. ಹಾಗಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಗುರುತಿಸಲು ಮನವಿ ಮಾಡಿದ್ದರು.