`ಹಿಂದೂ` ಪದ ವಿದೇಶದಿಂದ ಬಂದಿದ್ದು, ಭಾರತ ಮೂಲದ್ದಲ್ಲ: ಕಮಲ್ ಹಾಸನ್
ವಿದೇಶದವರು ಹೇಳಿದ ;ಹಿಂದೂ` ಪದವನ್ನು ಒಂದು ಧರ್ಮ ಹಾಗೂ ದೇಶವನ್ನು ಗುರುತಿಸಲು ನಾವೇಕೆ ಬಳಸಬೇಕು? ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.
ಚೆನ್ನೈ: 'ಸ್ವತಂತ್ರ ಭಾರತ ಮೊದಲ ಉಗ್ರ ಒಬ್ಬ ಹಿಂದೂ' ಎಂಬ ಹೇಳಿಕೆ ನೀಡುವ ಮೂಲಕ ಭಾರೀ ವಿವಾದ ಹುಟ್ಟಿಹಾಕಿದ್ದ ತಮಿಳು ನಟ, ರಾಜಕಾರಣಿ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಇದೀಗ 'ಹಿಂದೂ' ಪದ ವಿದೇಶದಿಂದ ಬಂದಿದ್ದು, ಭಾರತದ್ದಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಹಾಸನ್, " 'ಹಿಂದೂ' ಪದ ಭಾರತದ್ದಲ್ಲ, ವಿದೇಶದಿಂದ ಬಂದಿರುವದು. ಮೊಘಲರೋ ಅಥವಾ ಭಾರತಕ್ಕೆ ಬಂದ ಇನ್ಯಾರೋ ಈ ಪದವನ್ನು ನೀಡಿದ್ದಾರೆ. ಅಲ್ಲಿಯವರೆಗೂ ದೇಶದಲ್ಲಿ ಇಂತಹ ಪದದ ಬಳಕೆಯೇ ಇರಲಿಲ್ಲ. ಹೀಗಾಗಿ ನಮಗೆ ಸಾಕಷ್ಟು ಗುರುತುಗಳಿದ್ದರೂ, ಪದಗಳಿದ್ದರೂ ಸಹ ಯಾರೋ ವಿದೇಶದವರು ಹೇಳಿದ ಪದವನ್ನು ಒಂದು ಧರ್ಮ ಹಾಗೂ ದೇಶವನ್ನು ಗುರುತಿಸಲು ನಾವೇಕೆ ಬಳಸಬೇಕು?" ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ಉಪಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ, "ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಆತನ ಹೆಸರು ನಾಥೂರಾಮ್ ಗೋಡ್ಸೆ' ಎಂದು ಕಮಲ್ ಹಾಸನ್ ಹೇಳಿದ್ದರು. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದಾದ ಬಳಿಕ ಕಮಲ್ ಹಮ್ಮಿಕೊಂಡ ಚುನಾವಣಾ ಸಭೆಗಳಲ್ಲಿ ಕಮಲ್ ಮೇಲೆ ಕಲ್ಲು, ಮೊಟ್ಟೆಗಳನ್ನು ಎಸೆದು ಜನ ವಿರೋಧ ವ್ಯಕ್ತಪಡಿಸಿದ್ದರು.