ಶ್ರೀನಗರ: ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಅಮಿತ್ ಶಾ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಸಚಿವ ಅಮಿತ್ ಶಾ ಅವರು ಜೂನ್ 26(ಬುಧವಾರ) ರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

COMMERCIAL BREAK
SCROLL TO CONTINUE READING

ವಾಸ್ತವವಾಗಿ ಸಚಿವ ಅಮಿತ್ ಶಾ ಜೂನ್ 30ರಂದು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ "ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಗೃಹ ಸಚಿವರು ತಮ್ಮ ಜಮ್ಮು ಪ್ರವಾಸವನ್ನು ಮೊದಲೇ ನಿಗದಿಗೊಳಿಸಿದ್ದಾರೆ" ಎನ್ನಲಾಗಿದೆ. 


ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಶಾ ಅವರ ಮೊದಲ ಭೇಟಿ ಇದಾಗಿದೆ. ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ತೋರುವ ನೀತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದುವರಿಯುತ್ತದೆ ಎಂದು ಶಾ ಪ್ರತಿಪಾದಿಸಿದ್ದಾರೆ.


ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿಯನ್ನು ಮುಂದುವರಿಸಲು ಗೃಹ ಸಚಿವರು ಭದ್ರತಾ ಪಡೆಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರದ ಪ್ರಸ್ತುತ ನೀತಿಯು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ.


ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದ ವೇಳೆ ಗೃಹ ಸಚಿವ ಅಮಿತ್ ಶಾ ಶ್ರೀನಗರದಲ್ಲಿ ಭದ್ರತೆ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. "ಅಷ್ಟೇ ಅಲ್ಲದೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪಂಚಾಯತ್ ಸದಸ್ಯರನ್ನು ಸಹ ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ" ಎಂದು ಹೇಳಲಾಗುತ್ತಿದೆ.


ಜಮ್ಮು-ಕಾಶ್ಮೀರ ಭೇಟಿ ಸಂದರ್ಭದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಭೇಟಿ ಮಾಡಲಿರುವ ಅಮಿತ್ ಶಾ ಪ್ರಸ್ತುತ ಭದ್ರತಾ ಪರಿಸ್ಥಿತಿ ಬಗ್ಗೆ ಚರ್ಚಿಸುತ್ತಾರೆ" ಎನ್ನಲಾಗಿದೆ. ಈ ಸಮಯದಲ್ಲಿ, ಅಮಿತ್ ಶಾ ಅವರು ಅಮರನಾಥ ತೀರ್ಥ ಸ್ಥಳದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೆ ಅಮರನಾಥ ಯಾತ್ರೆ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.