ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ನಿಯೋಜಿತವಾಗಿರುವ ಸಿಆರ್​ಪಿಎಫ್​ ಮತ್ತು ಅರೆಸೇನಾ ಸಿಬ್ಬಂದಿಯ ರಕ್ಷಣಾ ದೃಷ್ಟಿಯಿಂದ ಇನ್ನುಮುಂದೆ ಏರ್ ಲಿಫ್ಟ್ ಮೂಲಕವೇ ಯೋಧರ ಸ್ಥಳಾಂತರ ಮಾಡಲು ಗೃಹ ಸಚಿವಾಲಯ ನಿರ್ಧರಿಸಿದೆ.



COMMERCIAL BREAK
SCROLL TO CONTINUE READING

ದೆಹಲಿಯಿಂದ ಶ್ರೀನಗರಕ್ಕೆ ಹಾಗೂ ಶ್ರೀನಗರದಿಂದ ದೆಹಲಿಗೆ ಮತ್ತು ಜಮ್ಮುವಿನಿಂದ ಶ್ರೀನಗರಕ್ಕೆ ಹಾಗೂ ಶ್ರೀನಗರದಿಂದ ಜಮ್ಮುವಿಗೆ ವಿಮಾನದಲ್ಲಿ ಯೋಧರನ್ನು ಸ್ಥಳಾಂತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಸಚಿವಾಲಯದ ಈ ನಿರ್ಧಾರದಿಂದ ಅಂದಾಜು 7.80 ಲಕ್ಷ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗೆ ಅನುಕೂಲವಾಗಲಿದೆ. 



ಈ ಮೊದಲು ಕಾನ್​ಸ್ಟೆಬಲ್​, ಹೆಡ್​​ ಕಾನ್​ಸ್ಟೆಬಲ್​ ಮತ್ತು ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​ಗಳಿಗೆ ಇದುವರೆಗೆ ಈ ನಿಯಮ ಅನ್ವಯವಾಗುತ್ತಿರಲಿಲ್ಲ. ಆದರೆ ಇಂದಿನ ಗೃಹ ಸಚಿವಾಲಯದ ನಿರ್ಧಾರದಿಂದ ಅವರಿಗೂ ಈ ನಿಯಮ ಅನ್ವಯವಾಗಲಿದೆ. ಪ್ರಸ್ತುತ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯವನ್ನು ನಿಧಾನವಾಗಿ ಎಲ್ಲ ಪಡೆಗಳಿಗೂ ವಿಸ್ತರಿಸಲಾಗುತ್ತಿದೆ. ಕರ್ತವ್ಯ ನಿಮಿತ್ತ ಪ್ರಯಾಣ ಹಾಗೂ ರಜೆಯ ನಿಮಿತ್ತ ಪ್ರಯಾಣಕ್ಕೂ ಈ ನಿಯಮ ಅನ್ವಯ ಆಗಲಿದ್ದು, ತಮ್ಮ ಊರಿಗೆ ತೆರಳಲು ಮತ್ತು ವಾಪಸಾಗಲೂ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗಿದೆ.




ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಐಟಿಬಿಪಿ ಮತ್ತು ಎಸ್ಎಸ್ಬಿ ಸೇರಿದಂತೆ ವಿವಿಧ ಅರೆಸೈನಿಕ ಪಡೆಗಳ ಮುಖ್ಯಸ್ಥರಿಗೆ ಈ ನಿರ್ಧಾರವನ್ನು ತಿಳಿಸಲಾಗಿದೆ ಮತ್ತು ತಕ್ಷಣವೇ ಈ ನಿಯಮ ಜಾರಿಗೆ ಬರಲಿದೆ ಎಂದು ಗುರುವಾರ ಗೃಹ ಸಚಿವಾಲಯ ತಿಳಿಸಿದೆ.