ಮೊರಾದಾಬಾದ್: ಉತ್ತರಪ್ರದೇಶದಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಭೂಮಿಗೆ ತಂಪೆರೆದಂತಾಗಿದ್ದರೂ ಮೊರಾದಾಬಾದ್‌ನಲ್ಲಿ ಮನೆಯೊಂದು ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಐದು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಮೊರಾದಾಬಾದ್‌ನಲ್ಲಿರುವ ಗುಡಿಯಾ ಬಾಗ್‌ನ ನಾಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಕುಟುಂಬಕ್ಕೆ 4 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಜತೆಗೆ ಗಾಯಾಳುಗಳಿಗೆ ಚಿಕಿತ್ಸೆ ನೆರವನ್ನೂ ಸಹ ಜಿಲ್ಲಾಡಳಿತವೇ ಭರಿಸುವುದಾಗಿ ಹೇಳಿದೆ. 


ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಜಮೀರ್ ಹುಸೇನ್ ಮಣ್ಣಿನ ಮನೆಯೊಂದರಲ್ಲಿ ತನ್ನವರೊಂದಿಗೆ ವಾಸವಿದ್ದ. ಸೋಮವಾರ ಸಂಜೆ ಬಿದ್ದ ಮಳೆಯಿಂದಾಗಿ ಮನೆ ಸಂಪೂರ್ಣ ಕುಸಿದಿದ್ದು, ಮನೆಯೊಳಗಿದ್ದವರ ಕಿರುಚಾಟ ಕೇಳಿ ಸ್ಥಳಕ್ಕೆ ಓಡಿಬಂದ ಸ್ಥಳೀಯರು ಅವಶೇಷಗಳನ್ನು ಸರಿಸಿ ಎಲ್ಲರನ್ನೂ ರಕ್ಷಿಸಲು ಪ್ರಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.