ನವದೆಹಲಿ: ಎಲ್ಲಾ ಪೋಷಕರಿಗೂ ತಮ್ಮ ಮಗಳು ಆದರ್ಶ ಸೋಸೆಯಾಗಬೇಕು ಎಂಬ ಆಸೆ ಇರುತ್ತದೆ. ಅಂತೆಯೇ ಗಂಡನ ಮನೆಯವರೂ ಕೂಡ ತಮ್ಮ ಸೊಸೆ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆದರೆ ಹಲವರು ಆದರ್ಶ ಸೊಸೆಯಾಗುವಲ್ಲಿ ವಿಫಲರಾಗುತ್ತಾರೆ. ಅಂತಹವರಿಗಾಗಿಯೇ ಇಲ್ಲೊಂದು ಯುನಿವರ್ಸಿಟಿ 'ಆದರ್ಶ ಸೋಸೆ ಆಗುವುದು ಹೇಗೆ?' ಎಂಬ ಬಗ್ಗೆ ಹೊಸ ಅಲ್ಪಾವಧಿ ಕೋರ್ಸ್ ಆರಂಭಿಸಲಿದೆ. ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ!


COMMERCIAL BREAK
SCROLL TO CONTINUE READING

ಭೋಪಾಲ್'ನಲ್ಲಿರುವ ಬರ್ಕತುಲ್ಲಾ ವಿಶ್ವವಿದ್ಯಾನಿಲಯವೇ 'ಆದರ್ಶ ಸೊಸೆ ಆಗುವುದು ಹೇಗೆ?' ಎಂಬ ಬಗ್ಗೆ ಅಲ್ಪಾವಧಿ ಕೋರ್ಸ್ ಆರಂಭಿಸಲಿರುವ ಯೂನಿವರ್ಸಿಟಿ. ಮಹಿಳೆಯ ಸಶಕ್ತೀಕರಣದಿಂದ ಉದ್ದೇಶದಿಂದ ಈ ಕೋರ್ಸ್ ಬಹಳ ಉಪಯೋಗವಾಗಲಿದೆ ಎಂದು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಹೇಳಿದೆ. ಮೂರು ತಿಂಗಳ ಅವಧಿಯ ಈ ಕೋರ್ಸ್ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಮೊದಲ ಬ್ಯಾಚ್'ನಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯಲಿದೆ. 


ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, "ಈ ಕೋರ್ಸ್'ನಿಂದಾಗಿ ಮದುವೆಯಾಗಿ ಹೊಸ ಮನೆಗೆ ಸೇರುವ ಹೆಣ್ಣುಮಗಳು, ಹೊಸ ಮನೆ, ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ವಿಶ್ವವಿದ್ಯಾನಿಲಯ ಇಡೀ ಸಮಾಜವನ್ನು ರೂಪಿಸುವ ಜವಾಬ್ದಾರಿ ಹೊಂದಿರುತ್ತದೆ. ಹಾಗಾಗಿ ಕುಟುಂಬಗಳನ್ನು ಬೆಸೆಯುವಂತಹ ಸಹಬಾಳ್ವೆಯ ಸಮಾಜ ನಿರ್ಮಿಸುವುದು ನಮ್ಮ ಧ್ಯೇಯವಾಗಿದೆ" ಎಂದು ವಿಶ್ವವಿದ್ಯಾನಿಲಯ ಉಪ ಕುಲಪತಿ ಪ್ರೊ.ಡಿ.ಸಿ.ಗುಪ್ತಾ ಹೇಳಿದ್ದಾರೆ.


ಆರಂಭದಲ್ಲಿ ಸೈಕಾಲಜಿ, ಸೋಷಿಯಾಲಜಿ ಮತ್ತು ಮಹಿಳಾ ಅಧ್ಯಯನ ವಿಭಾಗಗಳಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಈ ಕೋರ್ಸ್ ಆರಂಭಿಸಲಾಗುವುದು. ಇದರಿಂದ ಕುಟುಂಬದ ಏರು ಪೇರುಗಳನ್ನು ಹೇಗೆ ನಿಭಾಯಿಸುವುದು, ಸೂಕ್ಷ್ಮತೆಗಳನ್ನು ಅರಿಯುವುದು ಹೇಗೆ ಎಂಬುದರ ಬಗ್ಗೆ ತಿಳಿಸಲಾಗುತ್ತದೆ. ಇದು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿಸಲು ಮಾಡುತ್ತಿರುವ ಒಂದು ಪ್ರಯತ್ನ ಎಂದು ಪ್ರೊ.ಗುಪ್ತಾ ಹೇಳಿದ್ದಾರೆ. ಆದರೆ ಇದುವರೆಗೂ ಈ ಕೋರ್ಸ್'ಗೆ ಪ್ರವೇಶ ಪಡೆಯಲು ಇರಬೇಕಾದ ಕನಿಷ್ಠ ಅರ್ಹತೆ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.