ಗುವಾಹಾಟಿ:ಆಯಿಲ್ ಇಂಡಿಯಾ ಲಿಮಿಟೆಡ್‌ ಗೆ ಸೇರಿರುವ ಮತ್ತು ಅಸ್ಸಾಂನಲ್ಲಿರುವ ಒಂದು ತೈಲ ಬಾವಿಯ ಬಳಿ ದೊಡ್ಡ ಸ್ಫೋಟ ಸಂಭವಿಸಿದೆ. ಕಳೆದ ತಿಂಗಳು ಜೂನ್ 9 ರಂದು ಅನಿಲ ಸೋರಿಕೆಯಾದ ನಂತರ ಇಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಧಿಕಾರಿಯೊಬ್ಬರು ಇದನ್ನು ಖಚಿತಪಡಿಸಿದ್ದಾರೆ. ಸ್ಫೋಟದಲ್ಲಿ ಇಬ್ಬರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅಸ್ಸಾಂನ ತೀನ್ಸುಖಿಯಾ ಜಿಲ್ಲೆಯಲ್ಲಿರುವ ಸಾರ್ವಜನಿಕ ವಲಯದ ಕಂಪನಿ ಆಯಿಲ್ ಇಂಡಿಯಾಗೆ ಸೇರಿದ ಬಾಗಜನ್ ವೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ ಇಬ್ಬರು ದುರ್ಮರಣ ಹೊಂದಿದ್ದರು. ಕಳೆದ 15 ದಿನಗಳಿಂದ ಇಲ್ಲಿ ನಿರಂತರ ಅನಿಲ ಸೋರಿಕೆಯಾಗುತ್ತಿತ್ತು. ಈ ಅನಿಲ ಸೋರಿಕೆಯನ್ನು ತಡೆಯಲು ವಿದೇಶದಿಂದ ತಜ್ಞರನ್ನು ಕರೆಯಿಸಕೊಳ್ಳಲಾಗಿತ್ತು. ಘಟನೆ ನಡೆದ ವೇಳೆ ಈ ಮೂವರು ಸ್ಥಳದಲ್ಲಿಯೇ ಇದ್ದು, ಅವರಿಗೆ ತೀವ್ರವಾದ ಗಾಯಗಳಾಗಿವೆ ಎನ್ನಲಾಗಿದೆ. ಮೂವರನ್ನು ದಿಬ್ರುಗಡ್ ಆಸ್ಪತ್ರೆಗೆ ಸಾಗಿಸಲಾಗಿದೆ. 


ಈ ಕುರಿತು PTI ಸುದ್ದಿಸಂಸ್ಥೆಗೆ ಹೇಳಿಕೆ ನೀಡಿರುವ ಆಯಿಲ್ ಇಂಡಿಯಾ ಲಿಮಿಟೆಡ್ ನ ಸಿನಿಯರ್ ಮ್ಯಾನೇಜರ್ (ಪಬ್ಲಿಕ್ ಅಫೇರ್), ಜಯನತಾ ಬೋರ್ಮುಡೋಯಿ, ಗಾಯಗೊಂಡ ಮೂವರು ತಜ್ಞರನ್ನು ಅಂತೋನಿ ಸ್ಟೀವನ್ ರೆನೊಲ್ದ್ಸ್, ಡೌ ಡಲ್ಲಾಸ್ ಹಾಗೂ ಕ್ರೈಗ್ ನೀಲ್ ಡಂಕನ್ ಎಂದು ಗುರುತಿಸಲಾಗಿದೆ ಎಂದಿದ್ದಾರೆ. 


ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಬೆಂಕಿ ನಂದಿಸುವ ಕಾರ್ಯಾಚರಣೆಗೆ ವಿರಾಮ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 


ಕಳೆದ ಸುಮಾರು 27 ದಿನಗಳಿಂದ ಬಾವಿ ಸಂಖ್ಯೆ 5 ನಿರಂತರವಾಗಿ ಅನಿಲ ಹೊರಸೂಸುತ್ತಿದ್ದು, ಜೂನ್ 9 ರಂದು ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಬೆಂಕಿ ನಂದಿಸಲು ಮುಂದಾದ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದರು.