ಲೋಕಸಭೆಯಲ್ಲಿ ಟಿಎಂಸಿಯ ಶೇ.35 ಸ್ಥಾನಗಳಲ್ಲಿ ಮಹಿಳೆಯರಿರುವುದು ಹೆಮ್ಮೆಯ ಸಂಗತಿ: ಮಮತಾ ಬ್ಯಾನರ್ಜಿ
ಲೋಕಸಭೆಯಲ್ಲಿ ನಮ್ಮ ಪಕ್ಷದ ಶೇ.35 ಸ್ಥಾನಗಳಲ್ಲಿ ಮಹಿಳಾ ಸಂಸದರಿರುವುದು ಹೆಮ್ಮೆ ತಂದಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೊಲ್ಕತ್ತಾ: ಪ್ರಸ್ತುತ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಶೇ.35 ಸ್ಥಾನಗಳಲ್ಲಿ ಮಹಿಳೆಯರೇ ಇರುವುದು ಹೆಮ್ಮೆ ತಂದಿದೆ ಎಂದು ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, "ಇದುವರೆಗೂ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಅಂಗೀಕಾರವಾಗಿಲ್ಲ. ಆದರೂ ಸಹ 16ನೇ ಲೋಕಸಭೆಯಲ್ಲಿ ನಮ್ಮ ಪಕ್ಷದ ಶೇ.35 ಸ್ಥಾನಗಳಲ್ಲಿ ಮಹಿಳಾ ಸಂಸದರಿರುವುದು ಹೆಮ್ಮೆ ತಂದಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷವು ಶೇ.50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ 'ಮಹಿಳೆ ಸಮಾಜದ ಬೆನ್ನೆಲುಬು' ಎಂಬುದನ್ನು ವಿವರಿಸುತ್ತಾ, ಇಡೀ ವಿಶ್ವದ ಮಹಿಳೆಯರಿಗೆ ಮಹಿಳಾ ದಿನಾಚರಣೆಯಂದು ಅಭಿನಂದಿಸಿದ್ದಾರೆ. ಅಲ್ಲದೆ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮಹಿಳೆಯಾರ ಅಭಿವೃದ್ಧಿಗೆ ಪಣ ತೊಟ್ಟಿದೆ. ಇತ್ತೀಚೆಗಷ್ಟೇ ಮಹಿಳೆಯರಿಗಾಗಿ ಆರೋಗ್ಯ ಬೀಮಾ ಸ್ಮಾರ್ಟ್ ಕಾರ್ಡ್ 'ಸ್ವಾಸ್ಥ್ಯ ಸಾಥಿ'ಯನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಮತಾ, ಮಹಿಳೆಯರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಬಿಂಬಿಸಲು ಈ ಕಾರ್ಡ್ ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ" ಎಂದಿದ್ದಾರೆ.