ಬಿಜೆಪಿ ನನ್ನನ್ನು ಮಲಮಗನಂತೆ ಕಾಣುತ್ತಿದೆ-ಶತ್ರುಘ್ನನ್ ಸಿನ್ಹಾ
ಮುಂಬೈ: ಹಿರಿಯ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಬಿಜೆಪಿಯಲ್ಲಿ ರೆಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ಬಿಜೆಪಿ ಮತ್ತು ಸರ್ಕಾರಕ್ಕೆ ತಮ್ಮ ಮುಕ್ತ ಅಭಿಪ್ರಾಯಗಳಿಂದ ಚಾಟಿ ಬೀಸುತ್ತಿರುವ ಅವರು ಸುದ್ದಿ ಸಂಸ್ಥೆ ಐಎಎನ್ಎಸ್ ಜೊತೆಗೆ ಮಾತನಾಡುತ್ತಾ "ನನ್ನನ್ನು ಪೋಷಿಸಿದ ಪಕ್ಷವು ಈಗ ನನ್ನನ್ನು ಮಲಮಗನಂತೆ ನೋಡಿಕೊಳ್ಳುತ್ತಿದೆ. ನಿಜ ಹೇಳಬೇಕಂದರೆ ಇದು ನನ್ನನ್ನು ಉಸಿರುಗಟ್ಟುವಂತೆ ಮಾಡಿದೆ ಎಂದು ಪಕ್ಷದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚಿಗೆ ಯಶ್ವಂತ್ ಸಿನ್ಹಾ ಅವರು ಪ್ರಾರಂಭಿಸಿದ ರಾಷ್ಟ್ರ ಮಂಚ್-ರಾಜಕೀಯ ವೇದಿಕೆಗೆ ಸೇರ್ಪಡೆಯಾಗಿದ್ದ ಶತ್ರುಘ್ನ ಸಿನ್ಹಾರವರು ಬಿಜೆಪಿಯಲ್ಲಿ ಕೇವಲ ಮಾತನಾಡುವುದಕ್ಕೆ ಅವಕಾಶ ನೀಡಿದ್ದನ್ನು ಬಿಟ್ಟರೆ ಇನ್ನ್ಯಾವುದಕ್ಕೂ ನನಗೆ ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ರಾಷ್ಟ್ರ ಮಂಚ್ ಬಗ್ಗೆ ಮಾತನಾಡಿದ ಸಿನ್ಹಾ, ಇದು ಪಕ್ಷವನ್ನು ವಿಭಜಿಸುವುದಲ್ಲ ಅಥವಾ ವಿಚ್ಚೆಧಿಸುವದಲ್ಲ ಬದಲಾಗಿ ಈ ರಾಜಕೀಯ ವೇದಿಕೆಯ ಮೂಲಕ ರೈತರ ಆತ್ಮಹತ್ಯೆ, ನಿರುದ್ಯೋಗ, ಆಂತರಿಕ ಭದ್ರತೆ ಮತ್ತು ಬಾಹ್ಯ ಭದ್ರತೆಗೆ ಸಂಬಂಧಿತ ವಿಷಯಗಳನ್ನು ಈ ವೇದಿಕೆಯ ಮೂಲಕ ಚರ್ಚಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.