ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆ ನಿರ್ಣಾಯಕ ಹಂತ ತಲುಪಿದ್ದು, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಭಾವನಾತ್ಮಕ ಭಾಷಣ ಮಾಡುತ್ತಾ, ನಾನ್ಯಾವ ತಪ್ಪನ್ನೂ ಮಾಡಿಲ್ಲ, ನನ್ನನ್ನು ವಚನಭ್ರಷ್ಟ ಎನ್ನಬೇಡಿ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವಾಸಮತ ಯಾಚನೆಗೂ ಮುನ್ನ, ವಿಧಾನಸಭೆ ಕಲಾಪದಲ್ಲಿ ಭಾಷಣ ಮಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕಳೆದ ಗುರುವಾರದಿಂದ ಇವತ್ತಿನ ರಾಜಕೀಯದ ಹಲವಾರು ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ವಿಶ್ವಾಸಮತ ಯಾಚನೆ ಮಂಡನೆ ಮಾಡಿದ್ದೇನೆ. ಆದರೆ, ಇಷ್ಟು ದಿನ ಚರ್ಚೆಯನ್ನು ಎಳೆಯಲು ಒಂದು ಕಾರಣವೂ ಇದೆ. ಎಲ್ಲೋ ಇಂದು ಕಡೆ ಸ್ವಾರ್ಥದ ಜೊತೆಗೆ ಅತೃಪ್ತರ ಮನ ಬದಲಾಗುತ್ತದೆ ಎಂಬ ವಿಶ್ವಾಸವೂ ಇತ್ತು. ಹಾಗಾಗಿ ಚರ್ಚೆಯನ್ನು ಮಾಡಿದೆವು. ವಿಶ್ವಾಸಮತ ಯಾಚನೆ ವಿಳಂಬವಾಗಿದ್ದಕ್ಕೆ ಎಲ್ಲರಲ್ಲೂ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.


ವಿಪಕ್ಷ ನಾಯಕರು ಚರ್ಚೆ ನಡೆಸದಿರುವುದು ರಾಜಕೀಯ ಇತಿಹಾಸ
ವಿಧಾನಸಭೆಯಲ್ಲಿ ಕಳೆದ ಗುರುವಾರದಿಂದ ನಡೆಯುತ್ತಿರುವ ವಿಶ್ವಾಸಮತಯಾಚನೆ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಯಾವುದೇ ಚರ್ಚೆ ನಡೆಸದೆ ಹೊಸ ದಾಖಲೆ ಸೃಷ್ಟಿಸಿದ್ದಾರೆ. ರಾಜ್ಯದ ಜನತೆ, ಮಾಧ್ಯಮದವರು ಇಷ್ಟು ದಿನಾದರೂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡದೆ ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕುಳಿತಿದ್ದಾರೆ, ಕಾಲಹರಣ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಈ ಮೂಲಕ ನನ್ನ ಬಗ್ಗೆ ರಾಜ್ಯದಲ್ಲಿ ಅಪಪ್ರಚಾರ ಆಗುತ್ತಿದೆ. ಇದು ತಪ್ಪಬೇಕಿದೆ ಎಂದು ಸಿಎಂ ಹೇಳಿದರು.


ನಾನೆಂದೂ ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕೂತವನಲ್ಲ. ಅಧಿಕಾರದ ಬಗ್ಗೆ ನನಗೆ ಯಾವುದೇ ಮೋಹವಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಜನರ ಪರವಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. ಇದರಲ್ಲಿ ಮನುಷ್ಯ ಸಹಜ ಲೋಪಗಳಾಗಿರಬಹುದು. ಹಾಗೆಂದ ಮಾತ್ರಕ್ಕೆ ನನ್ನನ್ನು ವಚನಭ್ರಷ್ಟ ಎನ್ನಬೇಡಿ. ನಾನ್ಯಾವ ತಪ್ಪನ್ನೂ ಮಾಡಿಲ್ಲ. ಒಂದು ವೇಳೆ ಮಾಡಿದ್ದರೆ, ಆ ತಪ್ಪನ್ನು ತಿದ್ದಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ ಎಂದು ಸಿಎಂ ಸದನದ ಮುಂದೆ ಹೇಳಿದರು.