ನಾನು RSS ಆಲೋಚನೆಗಳನ್ನು ಒಪ್ಪುವುದಿಲ್ಲ, ಆದರೆ ನಾನು ಅವರ ಬದ್ಧತೆಯ ಅಭಿಮಾನಿ: ನಿತೀಶ್ ಕುಮಾರ್
ಹಿಂದೆ ಬಿಜೆಪಿ ಬಿಟ್ಟಿದ್ದಿರಿ, ಈಗ ಮತ್ತೆ ಬಿಜೆಪಿ ಜೊತೆ ಏಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅವರು ಪರಿಸ್ಥಿತಿ ಮತ್ತು ಚಿಂತನೆಯಲ್ಲಿ ಬದಲಾವಣೆಯಾಗಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾ: ನಾನು RSS ಆಲೋಚನೆಗಳನ್ನು ಒಪ್ಪುವುದಿಲ್ಲ, ಆದರೆ ಅವರ ಬದ್ಧತೆಯ ಅಭಿಮಾನಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದಲ್ಲಿ ಅಪರಾಧ ಘಟನೆಗಳು ಕಡಿಮೆಯಾಗಿವೆ, ರಾಜ್ಯ ಅಭಿವೃದ್ಧಿಯತ್ತ ಸಾಗಿದೆ ಎಂದು ಅವರು ಹೇಳಿದ್ದಾರೆ. ಪಾಟ್ನಾದಲ್ಲಿ ಖಾಸಗಿ ಸುದ್ದಿ ವಾಹಿನಿ ಕಾರ್ಯಕ್ರಮವೊಂದರಲ್ಲಿ, ಆರ್ಎಸ್ಎಸ್ನ ಎಂಟು ಭಾಗಗಳಲ್ಲಿ ಒಂದು ಭಾಗ ಮಾತ್ರ ಗೋಚರಿಸುತ್ತದೆ ಎಂದು ನಿತೀಶ್ ಹೇಳಿದರು. ಇದೇ ಸಮಯದಲ್ಲಿ ತಾವು ಆರ್ಎಸ್ಎಸ್ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆರ್ಎಸ್ಎಸ್ ದೇಶದಾದ್ಯಂತ ತನ್ನ ಮೂಲವನ್ನು ಹೆಚ್ಚಿಸಿದೆ ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದರು.
ರಾಮ ಮನೋಹರ್ ಲೋಹಿಯಾ, ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರಿಂದ ತಾವು ಪ್ರಭಾವಿತರಾಗಿರುವುದಾಗಿ ತಿಳಿಸಿದ ನಿತೀಶ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ನ್ಯಾಯಾಲಯದ ನಿರ್ಧಾರದ ನಂತರ ಅಥವಾ ಪರಸ್ಪರ ಒಪ್ಪಿಗೆಯೊಂದಿಗೆ ಮಾಡಬೇಕೆಂದು ಹೇಳಿದರು.
ಹಿಂದೆ ಬಿಜೆಪಿ ಬಿಟ್ಟಿದ್ದಿರಿ, ಈಗ ಮತ್ತೆ ಬಿಜೆಪಿ ಜೊತೆ ಏಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅವರು ಪರಿಸ್ಥಿತಿ ಮತ್ತು ಚಿಂತನೆಯಲ್ಲಿ ಬದಲಾವಣೆಯಾಗಿದೆ ಎಂದರು. "ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡುತ್ತಿದ್ದೇನೆ, ಪರಿಸ್ಥಿತಿ ಬದಲಾಗಿದೆ, ನಮ್ಮ ಜನಾಂಗದವರು ನಮ್ಮ ಹಳೆಯ ಮಿತ್ರರಾಗಿದ್ದಾರೆ, ಆದರೆ ಕೆಲವು ವಿಷಯಗಳ ಬಗ್ಗೆ ನಮ್ಮ ಹಳೆಯ ವಿಚಾರಧಾರೆಗಳು, ಇಂದಿಗೂ ಅದೇ ರೀತಿ ಇದೆ."
ಎಲ್ಲಾ ಪಕ್ಷಗಳು ತಮ್ಮದೇ ಆದ ಆಲೋಚನೆಗಳನ್ನು ಹೊಂದಿದೆ, ಆದರೆ ಮೈತ್ರಿ ಸರ್ಕಾರದಲ್ಲಿ ಕೆಲಸ ನಿರ್ವಹಿಸುವಾಗ ಒಟ್ಟಿಗೆ ಸೇರಿ ಕೆಲಸ ಮಾಡುವ ಅಗತ್ಯವಿದೆ ಎಂದ ನಿತೀಶ್, ಆರ್ಜೆಡಿ ಜೊತೆ ಸೇರಿದ್ದರ ಕಹಿ ಅನುಭವ ಆಗಿದೆ. ಕೆಲವು ಸಂದರ್ಭಗಳಲ್ಲಿ ಏನು ಆಗಬೇಕೋ ಅದು ಸಂಭವಿಸಿತು ಎಂದರು. "ಅವರೊಂದಿಗೆ ಮೈತ್ರಿಯಿಂದ ಹೊರಬಂದ ಬಳಿಕ, ಅದಕ್ಕೆ ಹೆಸರಿಟ್ಟಿದ್ದೂ ನಾವೇ" ಎಂದು ನಿತೀಶ್ ತಿಳಿಸಿದರು.
ಬಿಹಾರದಲ್ಲಿ ಮದ್ಯಪಾನದ ನಿಷೇಧ ಬಗ್ಗೆ ಮಾತನಾಡುತ್ತಾ, ಬಿಹಾರದಲ್ಲಿ ನಿರಂತರವಾಗಿ ಸಾಮಾಜಿಕ ಜಾಗೃತಿ ಮುಂದುವರಿಯುತ್ತಿದೆ ಎಂದು ನಿತೀಶ್ ಹೇಳಿದರು. ಬಿಹಾರ ಮತ್ತು ಗುಜರಾತ್ನಲ್ಲಿ ಮದ್ಯಪಾನದ ನಿಷೇಧದ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಅವರು ದೇಶದಾದ್ಯಂತ ಮದ್ಯದ ನಿಷೇಧವನ್ನು ಜಾರಿಗೊಳಿಸಬೇಕು ಎಂದು ಹೇಳಿದರು. ಮದ್ಯಪಾನದ ಮೂಲಕ ಜನರ ಜೀವನದ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ, ಇದು ಮಹಿಳೆಯರಲ್ಲಿ ಸಂತೋಷ ಎಂದು ನಿತೀಶ್ ಹೇಳಿದರು.
ಮತ್ತೊಂದು ಪ್ರಶ್ನೆಗೆ ಉತ್ತರವಾಗಿ, ಜೆಡಿಯು ಕುಟುಂಬದ ಪಕ್ಷವಲ್ಲ, ಜನರು ಪಕ್ಷದ ಅಧ್ಯಕ್ಷರಾಗಬೇಕೆಂದು ಬಯಸುವುದಾಗಿ ತಿಳಿಸಿದರು.
ರಫೇಲ್ ಒಪ್ಪಂದದಲ್ಲಿ ಕೇಂದ್ರ ಸರ್ಕಾರಕ್ಕೇಕೆ ಕ್ಲೀನ್ ಚಿಟ್ ನೀಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾನು ಕ್ಲೀನ್ ಚಿಟ್ ನೀಡುವ/ನೀಡದ ಮಹಾನ್ ವ್ಯಕ್ತಿ ಅಲ್ಲ. ರಫೇಲ್ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ ಎಂದರು.