ಬೆಂಗಳೂರು: ಗೌರಿ ಲಂಕೇಶ್ ಪತ್ರಕರ್ತೆಯಾಗಿರಬಹುದು, ಹೋರಾಟಗಾರ್ತಿಯಾಗಿರಬಹುದು ಆದರೆ ಚಿತ್ರ ನಿರ್ದೇಶಕ ಕೆ.ಪಿ ಪ್ರದೀಪ್ ರವರಿಗೆ ಗೌರಿ ಸ್ನೇಹಿತೆಯಾಗಿದ್ದಳು. ಗೌರಿ ಹತ್ಯೆ ನಂತರ ಅವರ ಕುರಿತಾಗಿ ಸಾಕ್ಷ್ಯ ಚಿತ್ರ ನಿರ್ಮಿಸಿರುವ ಕೆ.ಪಿ ಪ್ರದೀಪ, ತಮ್ಮ ಮತ್ತು ಗೌರಿ ಲಂಕೇಶ್ ನಡುವಿನ ಗೆಳೆತನ 16 ವರ್ಷಗಳದ್ದು ಎಂದು ಇಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದದಲ್ಲಿ ತಿಳಿಸಿದರು.


COMMERCIAL BREAK
SCROLL TO CONTINUE READING

10ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೌರಿ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನದ ನಂತರ ಮಾತನಾಡಿದ ಪ್ರದೀಪ್ "ಸೆಪ್ಟೆಂಬರ್ 5 ರಂದು ಗೌರಿಯ ಹತ್ಯೆಯಾದ ನಂತರ ಸಾಕ್ಷ್ಯಚಿತ್ರ ಮಾಡುವ ಯಾವುದೇ ಆಲೋಚನೆಯೂ ಕೂಡಾ ಇರಲಿಲ್ಲ, ಆದರೆ ಮರುದಿನ ದಿನ ಸಾಮಾಜಿಕ ಜಾಲತಾಣಗಳಲ್ಲಿ ಗೌರಿಯ ಪರಿಚಯವೂ ಇರದವರು ಸಹಿತ ಗೌರಿಯ ಹತ್ಯೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ ರೀತಿಯನ್ನು ನೋಡಿ ನನ್ನ ಮನಸ್ಥಿತಿಯನ್ನು ಬದಲಿಸಿದೆ. ಅದರಲ್ಲೂ ಸಾವಿರಾರು ಸಂಖ್ಯೆಯಲ್ಲಿ ಗೌರಿಗೋಸ್ಕರ ಪ್ರತಿಭಟನೆಗೆ ಇಳಿದಿದ್ದನ್ನು ನೋಡಿ ನಾನು ಗೌರಿ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾದೆ" ಎಂದು ಗೌರಿ ಸಾಕ್ಷ್ಯಚಿತ್ರದ ನಿರ್ದೇಶಕ ಪ್ರದೀಪ ಚಲನಚಿತ್ರೋತ್ಸವದಲ್ಲಿನ ಸಂವಾದದ ವೇಳೆ ತಿಳಿಸಿದರು. 


ಗೌರಿ ಕುರಿತ ಸಾಕ್ಷ್ಯಚಿತ್ರವು 700 ಗಂಟೆಗಳ ವಿಡಿಯೋ ಕ್ಲಿಪ್ ಗಳಿಂದ ಸುಮಾರು 22 ದಿನಗಳವರೆಗೆ ನಿರಂತರ ಶೂಟ್ ಮಾಡಲಾಗಿದೆ, ಆದರೆ ಗೌರಿಯ ಬಗ್ಗೆ ಇನ್ನು ಹೇಳದೆ ಇರುವ ಸಂಗತಿಗಳು ಸಾಕಷ್ಟಿವೆ ಆದ್ದರಿಂದ  ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿನ ರೀತಿಯಲ್ಲಿ ವಿಸ್ತರಿಸಿ ಚಿತ್ರ ಮಾಡುವ ಯೋಚನೆ ಇದೆ ಎಂದು ಅವರು ತಿಳಿಸಿದರು.