ಭಾರತೀಯ ವಾಯುಸೇನೆಯ AN-32 ವಿಮಾನ ನಾಪತ್ತೆ!
ವಾಯುಪಡೆ ಸುಖೋಯ್-30 ಯುದ್ಧ ವಿಮಾನ ಮತ್ತು ಸಿ-130 ವಿಶೇಷ ಕಾರ್ಯಾಚರಣೆ ವಿಮಾನಗಳ ಮೂಲಕ ಶೋಧ ಕಾರ್ಯಾಚರಣೆ ಆರಂಭಿಸಿದೆ.
ನವದೆಹಲಿ: ಅಸ್ಸಾಂನ ಜೋರಾತ್ ನಿಂದ ಹೊರಟಿದ್ದ ಭಾರತೀಯ ವಾಯುಪಡೆಗೆ ಸೇರಿದ AN-32 ವಿಮಾನ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ವಿಮಾನದಲ್ಲಿ 8 ಜನ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರು ಸೇರಿ 13 ಮಂದಿ ಪ್ರಯಾಣಿಸುತ್ತಿದ್ದರು.
ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸಾಂನ ಜೋರಾತ್ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಮೆಂಚುಕಕ್ಕೆ ವಾಯುನೆಲೆಗೆ ಹೊರಟಿದ್ದ AN-32 ವಿಮಾನ ಟೇಕಾಫ್ ಆದ ಅರ್ಧಗಂಟೆಯಲ್ಲಿಯೇ ಸಂಪರ್ಕ ಕಡಿದುಕೊಂಡಿತು.
ವಾಯುಸೇನೆ ಮೂಲಗಳ ಪ್ರಕಾರ, ವಾಯುನೆಲೆಯೊಂದಿಗೆ ಸಂಪರ್ಕ ಕಡಿದುಕೊಂಡು ಎರಡೂವರೆ ಗಂಟೆಯಾದರೂ ವಿಮಾನದೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ. ಇದರಿಂದಾಗಿ ಏನೋ ಅನಾಹುತವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ವಾಯುಪಡೆ ಸುಖೋಯ್-30 ಯುದ್ಧ ವಿಮಾನ ಮತ್ತು ಸಿ-130 ವಿಶೇಷ ಕಾರ್ಯಾಚರಣೆ ವಿಮಾನಗಳ ಮೂಲಕ ಶೋಧ ಕಾರ್ಯಾಚರಣೆ ಆರಂಭಿಸಿದೆ.