ಬುದ್ಧ ಪೂರ್ಣಿಮೆಯಂದು ಫಿದಾಯಿನ್ ದಾಳಿಗೆ ಸಂಚು; IB ಅಲರ್ಟ್
ಬುದ್ಧ ಪೂರ್ಣಿಮೆಯ ದಿನದಂದು ಭಯೋತ್ಪಾದಕರು ಗರ್ಭಿಣಿ ಸ್ತ್ರೀ ವೇಷ ಧರಿಸಿ ಹಿಂದೂ ಅಥವಾ ಬೌದ್ಧ ದೇವಾಲಯವನ್ನು ಪ್ರವೇಶಿಸುವ ಪ್ಲಾನ್ ಮಾಡಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಕೋಲ್ಕತ್ತಾ: ಬುದ್ಧ ಪೂರ್ಣಿಮೆಯ ದಿನದಂದು ಫಿದಾಯಿನ್ ದಾಳಿ ನಡೆಸಲು ಭಯೋತ್ಪಾದಕರು ಸಿದ್ಧತೆ ನಡೆಸುತ್ತಿದ್ದಾರೆ. ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಸಿ) ಅಥವಾ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಬುದ್ಧ ಪೂರ್ಣಿಮೆಯ ದಿನದಂದು ಭಯೋತ್ಪಾದಕರು ಗರ್ಭಿಣಿ ಸ್ತ್ರೀ ವೇಷ ಧರಿಸಿ ಹಿಂದೂ ಅಥವಾ ಬೌದ್ಧ ದೇವಾಲಯವನ್ನು ಪ್ರವೇಶಿಸುವ ಪ್ಲಾನ್ ಮಾಡಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದ್ದು, ಪಶ್ಚಿಮ ಬಂಗಾಳ ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಪೊಲೀಸರು ರಾಜ್ಯದ ಎಲ್ಲಾ ಬೌದ್ಧ ಮತ್ತು ಹಿಂದೂ ದೇವಾಲಯಗಳ ಪಟ್ಟಿ ಮಾಡಿ, ಕಟ್ಟೆಚ್ಚರ ವಹಿಸಿದ್ದಾರೆ.
ಪಶ್ಚಿಮ ಬಂಗಾಳದ ಅಧಿಕಾರಿಯೊಬ್ಬರು ಮಾತನಾಡಿ, "ಗುಪ್ತಚರ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯ ಮತ್ತು ಬೌದ್ಧ ಮಂದಿರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚುವರಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದ್ದು, ಭಯೋತ್ಪಾದಕರು ದಾಳಿ ನಡೆಸಲು ಯಾವುದೇ ಅವಕಾಶ ನೀಡುವುದಿಲ್ಲ" ಎಂದಿದ್ದಾರೆ.
ಇತ್ತೀಚೆಗೆ ಈಸ್ಟರ್ ಭಾನುವಾರದಂದು ಶ್ರೀಲಂಕಾದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ನಡೆಸಿದ ಸರಣಿ ಬಾಂಬ್ ಸ್ಪೋಟದಲ್ಲಿ 350ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.