ದೆಹಲಿಯಲ್ಲಿ NRC ಜಾರಿಯಾದರೆ, ಮೊದಲು ಹೋಗುವುದೇ ಮನೋಜ್ ತಿವಾರಿ: ಅರವಿಂದ್ ಕೇಜ್ರಿವಾಲ್
ಎನ್‌ಆರ್‌ಸಿಯನ್ನು ದೆಹಲಿಯಲ್ಲಿ ಜಾರಿಗೆ ತರಬೇಕು. ದೆಹಲಿಯಲ್ಲಿ ಎನ್‌ಆರ್‌ಸಿ ಜಾರಿಗೆ ಬಂದರೆ ಮನೋಜ್ ತಿವಾರಿ ಅವರೇ ಮೊದಲು ಹೊರಹೋಗಬೇಕಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಬಂದಿದ್ದೇ ಆದಲ್ಲಿ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರೇ ದೆಹಲಿಯಿಂದ ಹೊರಡುವ ಮೊದಲ ವ್ಯಕ್ತಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಗೆ ಎನ್‌ಆರ್‌ಸಿ ಪಟ್ಟಿಯನ್ನು ಕೋರಿ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿಯಾಗಿದ್ದ ಮನೋಜ್ ತಿವಾರಿ, "ಎನ್‌ಆರ್‌ಸಿ ಭಯೋತ್ಪಾದನೆ ವಿರುದ್ಧ ಹೋರಾಡಲು ಪರಿಣಾಮಕಾರಿ ಅಸ್ತ್ರ. ದೆಹಲಿಗೆ ಅಕ್ರಮವಾಗಿ ಪ್ರವೇಶಿಸುವವರು ಇಲ್ಲಿನ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ಅಲ್ಲದೆ, ದೆಹಲಿಯ ಆಂತರಿಕ ಭದ್ರತೆಗೆ ಅಪಾಯಕಾರಿ. ಹಾಗಾಗಿ NRC ಅನುಷ್ಠಾನದೊಂದಿಗೆ ದೆಹಲಿಯ ಜನರು ಉತ್ತಮ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, "ಪತ್ರಕರ್ತರ ಮೇಲಿನ ದಾಳಿಗೆ ಒಳನುಸುಳುವವರೇ ಕಾರಣ ಎಂದು ಮನೋಜ್ ತಿವಾರಿ ಹೇಳಿದ್ದಾರೆ, ಆದ್ದರಿಂದ ಎನ್‌ಆರ್‌ಸಿಯನ್ನು ದೆಹಲಿಯಲ್ಲಿ ಜಾರಿಗೆ ತರಬೇಕು. ದೆಹಲಿಯಲ್ಲಿ ಎನ್‌ಆರ್‌ಸಿ ಜಾರಿಗೆ ಬಂದರೆ ಮನೋಜ್ ತಿವಾರಿ ಅವರೇ ಮೊದಲು ಹೊರಹೋಗಬೇಕಾಗುತ್ತದೆ" ಎಂದಿದ್ದಾರೆ.