ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರಕ್ಕಿಂತ ಅಗ್ಗದ ವಿದ್ಯುತ್: ವಿಜಯ್ ಗೋಯೆಲ್
ಎಎಪಿ ಸರ್ಕಾರ ನೀಡುವ ಸಬ್ಸಿಡಿಗಳಿಗಿಂತ ಬಿಜೆಪಿ ಸರ್ಕಾರದ ಅಡಿಯಲ್ಲಿ ವಿದ್ಯುತ್ ಅಗ್ಗವಾಗಲಿದೆ ಎಂದು ದೆಹಲಿಯ ಬಿಜೆಪಿ ಮಾಜಿ ಅಧ್ಯಕ್ಷ ವಿಜಯ್ ಗೋಯೆಲ್ ಹೇಳಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರಕ್ಕಿಂತ ಅಗ್ಗದ ವಿದ್ಯುತ್ ನೀಡಲಿದೆ ಎಂದು ರಾಜ್ಯಸಭಾ ಸಂಸದ ಮತ್ತು ಬಿಜೆಪಿ ಮಾಜಿ ಅಧ್ಯಕ್ಷ ವಿಜಯ್ ಗೋಯೆಲ್ ಭಾನುವಾರ ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಎಎಪಿ ಸರ್ಕಾರ ನೀಡುವ ಸಬ್ಸಿಡಿಗಳಿಗಿಂತ ವಿದ್ಯುತ್ ಅಗ್ಗವಾಗಲಿದೆ ಎಂದು ಗೋಯೆಲ್ ಹೇಳಿದ್ದಾರೆ.
"ಬಿಜೆಪಿ ಸಬ್ಸಿಡಿಗಳನ್ನು ಕೊನೆಗೊಳಿಸಲಿದೆ ಎಂದು ಆಮ್ ಆದ್ಮಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಈ ವಿದ್ಯುತ್ ಕಂಪನಿಗಳನ್ನು ವಿರೋಧಿಸುವ ಮೂಲಕ ಕೇಜ್ರಿವಾಲ್ ಅಧಿಕಾರಕ್ಕೆ ಆಯ್ಕೆಯಾದರು, ಈಗ ಅವರು ಆ ಕಂಪನಿಗಳಿಗೆ ಲಾಭವಾಗುತ್ತಿದ್ದಾರೆ." ಈ ಕಂಪನಿಗಳಿಂದ ವಿದ್ಯುತ್ ದರವನ್ನು ಏಕೆ ಕಡಿಮೆ ಮಾಡಲಿಲ್ಲ ಎಂದು ಗೋಯೆಲ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದರು.
ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಬಿಜೆಪಿ ಹಿಂತೆಗೆದುಕೊಳ್ಳಲಿದೆ ಎಂದು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಭಾನುವಾರ ಹೇಳಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಎಪಿ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಈ ಯೋಜನೆಯ ಬಗ್ಗೆ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಮತ್ತು ಅವರು ಇದಕ್ಕೆ ವಿರುದ್ಧವಾಗಿದ್ದಾರೆ ಎಂದು ಹೇಳಿದರು.
ಎಎಪಿಯ ಈ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಜಯ್ ಗೋಯಲ್, ಕೇಜ್ರಿವಾಲ್ ಈ ಸಬ್ಸಿಡಿಗಳನ್ನು ತನ್ನ ಜೇಬಿನಿಂದ ನೀಡುತ್ತಿಲ್ಲ ಎಂಬುದನ್ನು ಸಾಮಾನ್ಯ ಜನರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಕೇಜ್ರಿವಾಲ್ ದೆಹಲಿಯ ಜನರನ್ನು ಮರುಳು ಮಾಡುತ್ತಿದ್ದಾರೆ:
"ಕೇಜ್ರಿವಾಲ್ ಸರ್ಕಾರ ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ವಿಜಯ್ ಗೋಯೆಲ್, ನಾವು ವಿದ್ಯುತ್ ಕಂಪನಿಗಳ ನಡುವೆ ಸ್ಪರ್ಧೆಯನ್ನು ಉತ್ತೇಜಿಸುತ್ತೇವೆ. ಇದರಿಂದಾಗಿ ಅವರು ತಮ್ಮ ದರವನ್ನು ಕಡಿಮೆ ಮಾಡುತ್ತಾರೆ. ಬಿಜೆಪಿ ಸೌರಶಕ್ತಿಯನ್ನು ಉತ್ತೇಜಿಸುತ್ತದೆ ಮತ್ತು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುತ್ತದೆ" ಎಂದು ಹೇಳಿದರು.
ಕೇಜ್ರಿವಾಲ್ ದೆಹಲಿಯ ಜನರನ್ನು ಮರುಳು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಎರಡು ತಿಂಗಳು ಮಾತ್ರ ಉಚಿತ ವಿದ್ಯುತ್ ನೀಡಿದ್ದಾರೆ. "ಐದು ವರ್ಷಗಳ ಹಿಂದೆ ಏಕೆ ಅವರು ಉಚಿತ ವಿದ್ಯುತ್ ನೀಡಲಿಲ್ಲ? ಕೇಜ್ರಿವಾಲ್ ಈ ಹಣವನ್ನು ಜನರಿಗೆ ಹಿಂದಿರುಗಿಸಬೇಕು" ಎಂದು ಗೋಯೆಲ್ ಆಗ್ರಹಿಸಿದರು.
ತಮ್ಮ ಸರ್ಕಾರ ಬಡವರಿಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದರು. ಆದರೆ ದೆಹಲಿಯಲ್ಲಿ ಬಡವರಿಗೆ ಆಯುಷ್ಮಾನ್ ಭಾರತ್ ನಂತಹ ಯೋಜನೆಗಳನ್ನು ಜಾರಿಗೆ ತರಲು ಕೇಜ್ರಿವಾಲ್ ಅವಕಾಶ ನೀಡಲಿಲ್ಲ. ಇದು ಜನರಿಗೆ 5 ಲಕ್ಷ ರೂಪಾಯಿ ಮೌಲ್ಯದ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ. ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಕೊಳೆಗೇರಿ ನಿವಾಸಿಗಳು ಒಂದೇ ಸ್ಥಳದಲ್ಲಿ ಎರಡು ಮಲಗುವ ಕೋಣೆ ಫ್ಲ್ಯಾಟ್‌ಗಳನ್ನು ಪಡೆಯುತ್ತಾರೆ. ಕಿಸಾನ್ ಸಮನ್ ನಿಧಿ ಅಡಿಯಲ್ಲಿ 6000 ರೂ. ದೊರೆಯಲಿದೆ ಎಂದರು.
"ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ದೆಹಲಿಯಲ್ಲಿ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತದೆ" ಎಂದು ಭರವಸೆ ನೀಡಿದ ಗೋಯೆಲ್, 2015 ರ ನಂತರ ಕೇಜ್ರಿವಾಲ್ ಸರ್ಕಾರ ವಾರಣಾಸಿ, ಗೋವಾ, ಪಂಜಾಬ್, ಉಪಚುನಾವಣೆಗಳು ಅಥವಾ ಮೂರು ಎಂಸಿಡಿ ಚುನಾವಣೆಗಳೂ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ ಎಂದವರು ತಿಳಿಸಿದರು.
"ಬೇರೆ ರಾಜ್ಯಗಳಿರಲಿ ತನ್ನ ಅಧಿಕಾರವಿರುವ ದೆಹಲಿಯಲ್ಲಿಯೂ ಸಹ ಒಂದೇ ಒಂದು ಲೋಕಸಭಾ ಸ್ಥಾನವನ್ನು ಗೆಲ್ಲಲು ಎಎಪಿಗೆ ಸಾಧ್ಯವಾಗಲಿಲ್ಲ" ಎಂದು ವಿಜಯ್ ಗೋಯೆಲ್ ಲೇವಡಿ ಮಾಡಿದರು.
ಎಎಪಿ ಸರ್ಕಾರಕ್ಕೆ ಹೋಲಿಸಿದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ವಿದ್ಯುತ್ ಇನ್ನೂ ಸಹ ಅಗ್ಗವಾಗಲಿದೆ ಎಂದು ಭರವಸೆ ನೀಡಿದ ವಿಜಯ್ ಗೋಯೆಲ್, "ಕಳೆದ ಐದು ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ವಿಫಲವಾಗಿದೆ. ನಮ್ಮ ಸರ್ಕಾರ ರಾಜಕೀಯ ಮಾಡುವುದಿಲ್ಲ. ಬದಲಿಗೆ ದೆಹಲಿಯನ್ನು ಅಭಿವೃದ್ಧಿಪಡಿಸುತ್ತದೆ. ಕೇಂದ್ರದ ಎಲ್ಲಾ ಯೋಜನೆಗಳು ದೆಹಲಿಯಲ್ಲಿ ಜಾರಿಗೆ ಬರಲಿವೆ. ಮಾಲಿನ್ಯವೂ ಕಡಿಮೆಯಾಗುತ್ತದೆ. ಅನಧಿಕೃತ ವಸಾಹತುಗಳನ್ನು ಸಹ ಕ್ರಮಬದ್ಧಗೊಳಿಸಲಾಗುವುದು" ಎಂದರು.
ಗಮನಾರ್ಹವಾಗಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಅಧಿಕಾರಾವಧಿ 2020 ರ ಫೆಬ್ರವರಿಯಲ್ಲಿ ಕೊನೆಗೊಳ್ಳಲಿದೆ.